ಕುಂಭಕೋಣಂ ದುರಂತ: ಮುಖ್ಯಸ್ಥ ಪಳನಿಸ್ವಾಮಿಗೆ ಜೀವಾವಧಿ ಶಿಕ್ಷೆ
2004ರ ಕುಂಭಕೋಣಂ ಶಾಲೆಯ ಅಗ್ನಿ ದುರಂತ ಪ್ರಕರಣ...
ತಂಜಾವೂರು: 2004ರ ಕುಂಭಕೋಣಂ ಶಾಲೆಯ ಅಗ್ನಿ ದುರಂತ ಪ್ರಕರಣ ಸಂಬಂಧ ಜಿಲ್ಲಾ ಸೆಷನ್ಸ್ ಕೋರ್ಟ್ ಬುಧವಾರ ತೀರ್ಪು ಪ್ರಕಟಿಸಿದ್ದು, ಶಾಲೆಯ ಸಂಸ್ಥಾಪಕ ಅಧ್ಯಕ್ಷ ಪಳನಿಸ್ವಾಮಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ 21 ಮಂದಿಯ ವಿರುದ್ಧ ಆರೋಪ ಮಾಡಲಾಗಿತ್ತು. ಆ ಪೈಕಿ 10 ಜನರನ್ನು ಅಪರಾಧಿಗಳು ಎಂದು ನ್ಯಾಯಾಲಯ ಹೆಸರಿಸಿದ್ದು, ಈ 10 ಅಪರಾಧಿಗಳ ಪೈಕಿ ಪಳನಿಸ್ವಾಮಿಗೆ ಜೀವಾವಧಿ ಶಿಕ್ಷೆ ಹಾಗೂ 51 ಲಕ್ಷ ರುಪಾಯಿ ದಂಡ ವಿಧಿಸಿದೆ. ಇನ್ನುಳಿದ 9 ಮಂದಿ ಅಪರಾಧಿಗಳಿಗೆ ತಲಾ ಐದು ವರ್ಷದ ಜೈಲುವಾಸದ ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸಿದೆ.
ಕುಂಬಕೋಣಂನ ಖಾಸಗಿ ಶಾಲೆಗೆ ಬೆಂಕಿ ತಾಗಿ ಸುಮಾರು 94 ಮಕ್ಕಳು ಸಜೀವವಾಗಿ ದಹನಗೊಂಡಿದ್ದರು. ಈ ದುರಂತ ಸಂಭವಿಸಿ ಸುಮಾರು 10 ವರ್ಷಗಳ ಬಳಿಕ ತೀರ್ಪು ಹೊರಬಿದ್ದಿದೆ.
ಶಾಲಾ ಸಂಸ್ಥಾಪಕ ಅಧ್ಯಕ್ಷ ಪಳನಿಸ್ವಾಮಿ, ಪತ್ನಿ ಸರಸ್ವತಿ, ಶಾಲಾ ಮುಖ್ಯೋಪಾದ್ಯಾಯಿನಿ ಶಾಂತಲಕ್ಷ್ಮಿ, ಶಿಕ್ಷಣ ಇಲಾಕೆ ಅಧಿಕಾರಿ ದೊರೈರಾಜ್, ಮಧ್ಯಾಹ್ನದ ಊಟದ ಉಸ್ತುವಾರಿ ವಿಜಯಲಕ್ಷ್ಮಿ, ಅಡುಗೆ ಮಾಡುತ್ತಿದ್ದ ವಾಸಂತಿ, ನಗರ ಪಾಲಿಕೆ ಇಂಜಿನಿಯರ್ ಜಯಚಂದ್ರನ್ ಸೇರಿದಂತೆ ಹತ್ತು ಮಂದಿ ಅಪರಾಧಿಗಳಾಗಿದ್ದು, ಇನ್ನುಳಿದಂತೆ 11 ಮಂದಿಯನ್ನು ಆರೋಪ ಮುಕ್ತಗೊಳಿಸಲಾಗಿದೆ.
ಪ್ರಕರಣದಲ್ಲಿ 21 ಮಂದಿಯನ್ನು ಆರೋಪಿಗಳನ್ನಾಗಿ ಹೆಸರಿಸಲಾಗಿತ್ತು. ಸುಮಾರು 5 ಸಾವಿರ ಪುಟಗಳ ಆರೋಪ ಪಟ್ಟಿಯನ್ನು ಸಲ್ಲಿಸಲಾಗಿತ್ತು. ಪ್ರಕರಣದ ವಿಚಾರಣೆ ಜು. 17ಕ್ಕೆ ಮುಕ್ತಾಯಗೊಂಡಿತ್ತು. ತೀರ್ಪನ್ನು ನ್ಯಾಯಾಧೀಶರು ಜು.30ಕ್ಕೆ ಕಾಯ್ದಿರಿಸಿದ್ದರು.
2004ರ ಜುಲೈ 16 ರಂದು ಶಾಲೆಯಲ್ಲಿ ಬಿಸಿಯೂಟ ತಯಾರು ಮಾಡುತ್ತಿದ್ದ ವೇಳೆ ಭೀಕರ ಅವಘಡ ಸಂಭವಿಸಿ ಮೊದಲ ಮಹಡಿಯಲ್ಲಿದ್ದ 95 ಮಕ್ಕಳು ಸಜೀವವಾಗಿ ದಹನಗೊಂಡಿದ್ದರು. ಶಾಲೆಯ ಮುಖ್ಯೋಪಾದ್ಯಾಯಿನಿ ಹಾಗೂ ಶಿಕ್ಷಕರು ಶಾಲಾ ಮಕ್ಕಳನ್ನು ಕೂಡಿ ಹಾಕಿ ಬೀಗ ಜಡಿದು ಕಾರ್ಯಕ್ರಮವೊಂದಕ್ಕೆ ತೆರಳಿದ್ದರಿಂದ ಮಕ್ಕಳು ಹೊರ ಬರಲಾರದೆ ಸಜೀವವಾಗಿ ದಹನಗೊಂಡಿದ್ದರು. ಶಾಲಾ ಶಿಕ್ಷಕರ ಬೇಜಾವಾಬ್ದಾರಿತನದಿಂದ ಅಮಾಯಕ ಮಕ್ಕಳು ಪ್ರಾಣ ಕಳೆದುಕೊಂಡಿದ್ದರು.