ನ್ಯಾಷನಲ್ ಹೆರಾಲ್ಡ್ ಪ್ರಕರಣ: ಹೈಕೋರ್ಟ್ ಮೆಟ್ಟಿಲೇರಿದ ಕಾಂಗ್ರೆಸ್
ನವದೆಹಲಿ: 'ನ್ಯಾಷನಲ್ ಹೆರಾಲ್ಡ್' ಆಸ್ತಿ ಕಬಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಬುಧವಾರ ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
ಕಾಂಗ್ರೆಸ್‌ನ ಹಿರಿಯ ಮುಖಂಡರಾದ ಕಪಿಲ್ ಸಿಬಲ್ ಹಾಗೂ ಅಭಿಶೇಕ್ ಮನು ಸಿಂಘ್ವಿ ಅವರು ಕಾಂಗ್ರೆಸ್ ಪರವಾಗಿ ಅಖಾಡಕ್ಕೆ ಇಳಿದಿರುವುದಾಗಿ ಮೂಲಗಳಿಂದ ತಿಳಿದುಬಂದಿದೆ.
ಪ್ರಕರಣ ಸಂಬಂದ ಮುಂದಿನ ವಿಚಾರಣೆ ಆಗಸ್ಟ್ 1 ಕ್ಕೆ ನಡೆಯಲಿದ್ದು, ವಿಚಾರಣೆ ವೇಳೆ ಪ್ರಕರಣ ಸಂಬಂಧ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರ ಮೇಲಿನ ಆರೋಪವನ್ನು ರದ್ದು ಮಾಡುವಂತೆ ನ್ಯಾಯಾಲಯಕ್ಕೆ ಮನವಿ ಮಾಡಲಾಗುತ್ತದೆ ಎಂದು ಪಕ್ಷ ಹೇಳಿದೆ.
ನ್ಯಾಷನಲ್ ಹೆರಾಲ್ಡ್ ಪ್ರಕರಣ ಸಂಬಂಧ ಆಗಸ್ಟ್ 7ರೊಳಗೆ ವಿಚಾರಣೆಗೆ ಹಾಜರಾಗುವಂತೆ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರಿಗೆ ದೆಹಲಿಯ ಪಟಿಯಾಲ ಕೋರ್ಟ್ ಕಳೆದ ತಿಂಗಳು ಸಮನ್ಸ್ ಜಾರಿ ಮಾಡಿತ್ತು. ಏತನ್ಮಧ್ಯೆ, ಆದಾಯ ತೆರಿಗೆ ಇಲಾಖೆ ಸಹ ಕಾಂಗ್ರೆಸ್ ಪಕ್ಷಕ್ಕೆ ನೋಟಿಸ್ ಜಾರಿ ಮಾಡಿತ್ತು.
ಮಾಜಿ ಪ್ರಧಾನಿ ದಿ.ಜವಾಹರಲಾಲ್ ನೆಹರೂ ಅವರು ಸ್ಥಾಪಕ ಸಂಪಾದಕರಾಗಿದ್ದ 'ನ್ಯಾಷನಲ್ ಹೆರಾಲ್ಡ್' ಪತ್ರಿಕೆಗೆ ಸೇರಿದ ಸುಮಾರ 1,600 ಕೋಟಿ ರುಪಾಯಿ ಮೌಲ್ಯದ ಆಸ್ತಿ ಕಬಳಿಸಲು ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರು ಸಾರ್ವಜನಿಕ ಕಂಪನಿಯನ್ನು ಖಾಸಗಿ ಕಂಪನಿಯಾಗಿ ಮಾರ್ಪಡಿಸಿಕೊಂಡಿದ್ದಾರೆ ಎಂದು ಸುಬ್ರಮಣಿಯನ್ ಸ್ವಾಮಿ ಆರೋಪಿಸಿದ್ದರು.
''ಯಂಗ್ ಇಂಡಿಯನ್ ಎಂಬ ಹೆಸರಿನ ಖಾಸಗಿ ಕಂಪನಿ ಸ್ಥಾಪಿಸಿಕೊಂಡಿರುವ ಸೋನಿಯಾ ಮತ್ತು ರಾಹುಲ್ ಇದರ ಮೂಲಕ ಹೆರಾಲ್ಡ್ ಮಾತೃಸಂಸ್ಥೆ 'ಅಸೋಸಿಯೇಟೆಡ್ ಜರ್ನಲ್ಸ್ ಲಿಮಿಟೆಡ್' ಎಂಬ ಪಬ್ಲಿಕ್ ಕಂಪನಿಯನ್ನು ಖರೀದಿಸಿದ್ದಾರೆ. ಇದಕ್ಕಾಗಿ ಎಐಸಿಸಿ 90 ಕೋಟಿ ರೂ. ಸಾಲವನ್ನು ಯಾವುದೇ ಭದ್ರತೆಯಿಲ್ಲದೆ ಯಂಗ್ ಇಂಡಿಯನ್‌ಗೆ ನೀಡಿದೆ. ವಾಣಿಜ್ಯ ಉದ್ದೇಶಗಳಿಗಾಗಿ ರಾಜಕೀಯ ಪಕ್ಷವೊಂದು ಸಾಲ ನೀಡುವುದು ಆದಾಯ ತೆರಿಗೆ ಕಾಯ್ದೆ ಅಡಿಯಲ್ಲಿ ಕಾನೂನಿನ ಸ್ಪಷ್ಟ ಉಲ್ಲಂಘನೆ,'' ಎಂದು ಸ್ವಾಮಿ ದೂರಿದ್ದರು.