ಸರ್ಕಾರಿ ಬಂಗಲೆ ಖಾಲಿ ಮಾಡದ ಮಾಜಿ ಕೇಂದ್ರ ಸಚಿವರಿಗೆ ನೋಟಿಸ್
ನವದೆಹಲಿ: ಸರ್ಕಾರಿ ಬಂಗಲೆಗಳನ್ನು ಖಾಲಿ ಮಾಡದ ಕೇಂದ್ರದ 16 ಮಾಜಿ ಸಚಿವರಿಗೆ ಕೇಂದ್ರ ಸರ್ಕಾರ ನೋಟಿಸ್ ನೀಡಿದೆ.
ಈ ಹಿಂದೆ ಕೇಂದ್ರದಲ್ಲಿ ಅಧಿಕಾರದಲ್ಲಿದ್ದ ಯುಪಿಎ ಸರ್ಕಾರದ ಅವಧಿಯಲ್ಲಿ ಸಚಿವರಿಗೆ ನೀಡಲಾಗಿದ್ದ ಸರ್ಕಾರಿ ಬಂಗಲೆಗಳನ್ನು ಖಾಲಿ ಮಾಡದೇ ಅನಧಿಕೃತವಾಗಿ ಉಳಿದುಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಸುಮಾರು 16 ಮಾಜಿ ಸಚಿವರಿಗೆ ಉಚ್ಚಾಟನಾ ನೋಟಿಸ್ ನೀಡಲಾಗಿದೆ ಎಂದು ಕೇಂದ್ರ ನಗರಾಭಿವೃದ್ಧಿ ಸಚಿವ ವೆಂಕಯ್ಯ ನಾಯ್ಡು ಅವರು ಹೇಳಿದ್ದಾರೆ.
ಅನಧಿಕೃತವಾಗಿ ಸರ್ಕಾರಿ ಬಂಗಲೆಗಳಲ್ಲಿ ವಾಸವಿರುವ ಮಾಜಿ ಸಚಿವರಿಗೆ 21 ಲಕ್ಷ ರುಪಾಯಿ ದಂಡ ವಿಧಿಸಲಾಗಿದೆ ಎಂದರು.
ಮಾಜಿ ಕೇಂದ್ರ ಸಂಪರ್ಕ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಕಪಿಲ್ ಸಿಬಲ್ ಸೇರಿದಂತೆ ಜೈಪಾಲ್ ರೆಡ್ಡಿ, ಸಚಿನ್ ಪಿಲೋಟ್, ಫರಾಕ್ ಅಬ್ದುಲ್ಲಾ, ಅಜಿತ್ ಸಿಂಗ್, ಬೇನಿ ಪ್ರಸಾದ್ ವರ್ಮಾ, ಪಲ್ಲಂ ರಾಜು, ಡಾ. ಗಿರಿಜ ವ್ಯಾಸ, ಕೃಷ್ಣ ತೀರ್ಥ, ಶ್ರೀಕಾಂತ್ ಜೇನಾ, ಜಿತೇಂದ್ರ ಸಿಂಗ್, ಪ್ರದೀಪ್ ಜೈನ್ ಆದಿತ್ಯ, ಪಾರಿಕ ಬಲರಾಮ್ ನಾಯ್ಕ್, ಖಿಲ್ಲಿ ಕ್ರಿಪರಾನಿ ಮತ್ತು ಮಾಣಿಖ್ ರಾವ್ ಗಾವಿಟ್ ಅವರಿಗೆ ನೋಟಿಸ್ ನೀಡಲಾಗಿದೆ.
ಇದೇ ವೇಳೆ, ಮತ್ತಿತ್ತರ ಸರ್ಕಾರಿ ಬಂಗಲೆಗಳಲ್ಲಿ ಸುಮಾರು 21 ಮಾಜಿ ಸಚಿವರು ವಾಸವಿದ್ದು, ಅವರಿಗೂ ಹದಿನ್ನೈದು ದಿನಗಳ ಕಾಲಾವಕಾಶ ನೀಡಲಾಗಿದ್ದು, ಅಷ್ಟರಲ್ಲೇ ಬಂಗಲೆಗಳನ್ನು ಖಾಲಿ ಮಾಡಬೇಕಿದೆ ಎಂದು ವೆಂಕಯ್ಯ ನಾಯ್ಡು ತಿಳಿಸಿದ್ದಾರೆ.