ಅರುಣ್ ಜೇಟ್ಲಿಯನ್ನು ಭೇಟಿ ಮಾಡಿದ ಜಾನ್ ಕೆರ್ರಿ
ಭಾರತದೊಂದಿಗೆ ಉತ್ತಮ ಬಾಂಧವ್ಯ ವೃದ್ಧಿಸುವ ಆಶಯದೊಂದಿಗೆ ಭಾರತಕ್ಕೆ...
ನವದೆಹಲಿ: ಭಾರತದೊಂದಿಗೆ ಉತ್ತಮ ಬಾಂಧವ್ಯ ವೃದ್ಧಿಸುವ ಆಶಯದೊಂದಿಗೆ ಭಾರತಕ್ಕೆ ಆಗಮಿಸಿರುವ ಅಮೆರಿಕ ರಾಜ್ಯ ಕಾರ್ಯದರ್ಶಿ ಜಾನ್ ಕೆರ್ರಿ ಅವರು ಇಂದು ವಿತ್ತ ಸಚಿವ ಅರುಣ್ ಜೇಟ್ಲಿ ಅವರೊಂದಿಗೆ ಮಾತುಕತೆ ನಡೆಸಲಿದ್ದಾರೆ.
ಕೆರ್ರಿ ಅವರ ಭಾರತ ಭೇಟಿ ಕುತೂಹಲ ಕೆರಳಿಸಿದೆ. ಮುಂಬರುವ ಸೆಪ್ಟೆಂಬರ್ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕಕ್ಕೆ ಭೇಟಿ ನೀಡಿ, ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಜತೆ ಚರ್ಚೆ ನಡೆಸಲಿರುವುದು ಇಂದಿನ ಸಭೆಯಲ್ಲಿ ಚರ್ಚೆಯಾಗಲಿದೆ.
ನಂತರ ಭಾರತದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರನ್ನು ಭೇಟಿ ಮಾಡಲಿರುವ ಕೆರ್ರಿ ಅವರು ಹಲವು ಸುತ್ತಿನ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ. ಈ ಮೂಲಕ ಉಭಯ ದೇಶಗಳ ರಚನಾತ್ಮಕ ಬಾಂಧವ್ಯ ಮತ್ತಷ್ಟು ಗಟ್ಟಿಯಾಗುವ ನಿರೀಕ್ಷೆ ಇದೆ.
ಕಳೆದ ಎರಡು ದಿನಗಳ ಹಿಂದೆ ಅಮೆರಿಕನ್ ಪ್ರಗತಿ ಕೇಂದ್ರದ ಸಭಿಕರನ್ನುದ್ದೇಶಿಸಿ ಮಾತನಾಡುತ್ತಿದ್ದ ಕೆರ್ರಿ ನರೇಂದ್ರ ಮೋದಿಯವರ ಎಲ್ಲರ ಜತೆಗೆ ಎಲ್ಲ ವಿಕಾಸ ಮಹಾನ್ ಪರಿಕಲ್ಪನೆಯಾಗಿದೆ ಎಂದು ಬಣ್ಣಿಸಿದ್ದರು. ಅಲ್ಲದೆ ಭಾರತದೊಂದಿಗೆ ಅಮೆರಿಕಾದ ಸಂಬಂಧ 21ನೇ ಶತಮಾನದ ದಿಕ್ಕನ್ನು ನಿರ್ಧರಿಸುವಲ್ಲಿ ಮಹತ್ವದ ಪರಿಣಾಮ ಬೀರಲಿದೆ. ಭಾರತ ಅಮೆರಿಕಾ ಸಂಬಂಧಗಳು ಒಟ್ಟಿಗೆ ಅರಳಬೇಕಿದೆ. ಅಮೆರಿಕದ ಮತ್ತು ಭಾರತ ಮತ್ತು 21ನೇ ಅನಿವಾರ್ಯ ಪಾಲುದಾರರಾಗದ ಅನಿವಾರ್ಯತೆ ಇದೆ ಎಂದಿದ್ದರು.