ಅಪ್ರಚೋದಿತ ಪಾಕ್ ದಾಳಿಗೆ, ಕಠಿಣ ಪ್ರತ್ಯುತ್ತರ: ಸುಹಾಗ್ ಎಚ್ಚರಿಕೆ
ಸೇನಾ ಮುಖ್ಯಸ್ಥರಾಗಿ ಅಧಿಕಾರ ಸ್ವೀಕರಿಸಿದ ಮಾರನೇ...
ನವದೆಹಲಿ: ಸೇನಾ ಮುಖ್ಯಸ್ಥರಾಗಿ ಅಧಿಕಾರ ಸ್ವೀಕರಿಸಿದ ಮಾರನೇ ದಿನವೇ ಜನರಲ್ ದಲ್‌ಬೀರ್ ಸಿಂಗ್ ಸುಹಾಗ್ ಅವರು ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿದ್ದಾರೆ.
ಪಾಕ್ ಸೈನಿಕರಿಂದ ಭವಿಷ್ಯದಲ್ಲಿ ಶಿರಚ್ಛೇದನದಂತಹ ಪ್ರಕರಗಳು ನಡೆದರೆ ಭಾರತದ ಪ್ರತಿಕ್ರಿಯೆ ತೀಕ್ಷ್ಣವೂ ಹಾಗೂ ಕಠಿಣವಾಗಿರುತ್ತದೆ ಎಂದು ಹೇಳಿದ್ದಾರೆ.
ಸೇನಾ ಸಿಬ್ಬಂದಿಯಿಂದ ಸ್ವಾಗತ ಗೌರವ ರಕ್ಷೆ ಸ್ವೀಕರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸುಹಾಗ್ ಅವರು, ಭಾರತೀಯ ಸೈನಿಕರ ಶಿರಚ್ಛೇದನ ಪ್ರಕರಣಗಳು ಭವಿಷ್ಯದಲ್ಲಿ ಮರುಕಳಿಸಿದರೆ ಪಾಕ್ ಸೈನಿಕರಿಗೆ ತತ್‌ತಕ್ಷಣ ಪ್ರತಿಕ್ರಿಯೆ ನೀಡಲಾಗುವುದು. ಆ ಪ್ರತಿಕ್ರಿಯೆ ಘೋರವಾಗಿರುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ನಿನ್ನೆಯಷ್ಟೇ ಭಾರತೀಯ ಸೇನೆಯ ನಿರ್ಗಮಿತ ಮುಖ್ಯಸ್ಥ ಜನರಲ್ ಬಿಕ್ರಂ ಸಿಂಗ್ ಅವರು ಮಾತನಾಡಿ, ಭಾರತೀಯ ಯೋಧರಿಬ್ಬರ ಬರ್ಬರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ನಾವು ಸುಮ್ಮನೆ ಕೈಕಟ್ಟಿಕೂರಲಿಲ್ಲ. ಪಾಕ್ ದುಸ್ಸಾಹಸಕ್ಕೆ ತಕ್ಕ ಉತ್ತರ ನೀಡಿದ್ದೇವೆ ಎಂದು ಹೇಳಿದ್ದರು.
ಕಳೆದ ವರ್ಷ ಜನವರಿ 8 ರಂದು ಪೂಂಚ್ ವಲಯದ ಗಡಿ ನಿಯಂತ್ರಣ ರೇಖೆಯಲ್ಲಿ ಪಾಕ್ ಸೈನಿಕರು ಭಾರತೀಯ ಸೈನಿಕ ಲ್ಯಾನ್ಸ್ ನಾಯಕ್, ಹೇಮರಾಜ್ ಎಂಬುವರ ಶಿರಚ್ಛೇದನ ಮಾಡಿದ್ದರು. ಲ್ಯಾನ್ಸ್ ನಾಯಕ್ ಸುಧಾಕರ್ರನ್ನು ಚಿತ್ರಹಿಂಸೆ ನೀಡಿ ಹತ್ಯೆ ಮಾಡಲಾಗಿತ್ತು. ಪಾಕ್ ಈ ಕೃತ್ಯಕ್ಕೆ ದೇಶಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಆಗ 'ನಾವು ನಮ್ಮ ಆಯ್ಕೆಯ ಸ್ಥಳ ಮತ್ತು ಸಮಯದಲ್ಲಿ ತಕ್ಕ ಉತ್ತರ ನೀಡಿಲಿದ್ದೇವೆಂದು ಜ. ಬಿಕ್ರಂ ಸಿಂಗ್ ಹೇಳಿದ್ದರು.