ಜಯಲಲಿತಾ ಲವ್ ಲೆಟರ್ ಟು ಮೋದಿ ಲೇಖನಕ್ಕೆ ಭಾರಿ ಖಂಡನೆ
ಚೆನ್ನೈ: ಶ್ರೀಲಂಕಾದ ರಕ್ಷಣಾ ಇಲಾಖೆ ವೆಬ್‌ಸೈಟ್‌ನಲ್ಲಿ ಜಯಲಲಿತಾ ಲವ್ ಲೆಟರ್ ಟು ಮೋದಿ ಲೇಖನಕ್ಕೆ ತಮಿಳುನಾಡಿನಾದ್ಯಂತ ವ್ಯಾಪಕ ಆಕ್ರೋಶ ವ್ಯಕ್ತವಾಗಿದ್ದು, ರಾಜ್ಯಾದ್ಯಂತ ಕಾರ್ಯಕರ್ತರು ಭಾರಿ ಪ್ರತಿಭಟನೆ ನಡೆಸುತ್ತಿದ್ದಾರೆ.
ವೆಬ್‌ಸೈಟ್‌ನಲ್ಲಿ ಈ ಹಿಂದೆ ಯುಪಿಎ ಸರ್ಕಾರಕ್ಕೆ ಬರೆಯುತ್ತಿದ್ದಂತೆ ಮೋದಿಗೂ ಪತ್ರ ಬರೆದರೆ ಏನು ನಡೆಯೋದಿಲ್ಲ. ಮೋದಿ ಮೇಲೆ ಪ್ರಭಾವ ಬೀರಬೇಕಾದ್ರೆ ಜಯಲಲಿತಾ ಪ್ರೇಮ ಪತ್ರದ ರೀತಿಯಲ್ಲಿ ಪತ್ರ ಬರಬೇಕಾಗುತ್ತೆ ಎಂದು ಬರೆಯಲಾಗಿದೆ.
ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ಜೆ. ಜಯಲಲಿತಾ ವಿರುದ್ಧ ಅವಹೇಳನಾಕಾರಿ ಲೇಖನ ಖಂಡಿಸಿ ತಮಿಳುನಾಡಿನಾದ್ಯಂತ ಎಐಎಡಿಎಂಕೆ ಕಾರ್ಯಕರ್ತರು ಭಾರಿ ಪ್ರತಿಭಟನೆ ಆರಂಭಿಸಿದ್ದಾರೆ.
ಶ್ರೀಲಂಕಾ ಸರ್ಕಾರ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ವಿರುದ್ಧ ಬರೆದ ಅವಹೇಳನಾಕಾರಿ ಲೇಖನವನ್ನು ಡಿಎಂಕೆ ಮುಖ್ಯಸ್ಥ ಎಂ. ಕರುಣಾನಿಧಿ ಕೂಡಾ ಖಂಡಿಸಿದ್ದಾರೆ.
ಪ್ರತಿಭಟನೆಯಿಂದ ಎಚ್ಚೆತ್ತ ಶ್ರೀಲಂಕಾ ಸರ್ಕಾರ ಕ್ಷಮೆಯಾಚಿಸಿದ್ದು, ಅನುಮತಿ ಇಲ್ಲದೆ ಲೇಖನವನ್ನು ಪ್ರಕಟಿಸಲಾಗಿದೆ ಎಂಬ ಬೇಜವಾಬ್ದಾರಿ ಹೇಳಿಕೆಯನ್ನು ನೀಡಿದೆ.
ತನ್ನ ಅಚಾತುರ್ಯದಿಂದ ಎಚ್ಚೆತ್ತ ರಕ್ಷಣಾ ಇಲಾಖೆ ಕೂಡಲೇ ಲೇಖನವನ್ನು ತೆಗೆದುಹಾಕಿದೆ.