ಡಬ್ಲ್ಯೂಟಿಒ ಒಪ್ಪಂದ ನಿರಾಕರಣೆಯಿಂದ ತಪ್ಪು ಸಂದೇಶ ರವಾನೆ: ಅಮೆರಿಕ
ಭಾರತ ವಿಶ್ವ ವಾಣಿಜ್ಯ ಸಂಘಟನೆ(ಡಬ್ಲ್ಯೂಟಿಒ)ಯ ಆಹಾರ ಸಬ್ಸಿಡಿ ಒಪ್ಪಂದ ತಿರಸ್ಕರಿಸುವುದರಿಂದ ತಪ್ಪು..
ನವದೆಹಲಿ: ಭಾರತ ವಿಶ್ವ ವಾಣಿಜ್ಯ ಸಂಘಟನೆ(ಡಬ್ಲ್ಯೂಟಿಒ)ಯ ಆಹಾರ ಸಬ್ಸಿಡಿ ಒಪ್ಪಂದ ತಿರಸ್ಕರಿಸುವುದರಿಂದ ತಪ್ಪು ಸಂದೇಶ ರವಾನೆಯಾಗುತ್ತದೆ ಎಂದು ಅಮೆರಿಕದ ವಿದೇಶಾಂಗ ಸಚಿವ ಜಾನ್ ಕೆರ್ರಿ ಅವರು ಶುಕ್ರವಾರ ಹೇಳಿದ್ದಾರೆ.
ಇಂದು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ ಕೆರ್ರಿ, ವಿಶ್ವ ವಾಣಿಜ್ಯ ಸಂಘಟನೆಯ ಒಪ್ಪಂದ ತಿರಸ್ಕರಿಸುವುದರಿಂದ ತಪ್ಪು ಸಂದೇಶ ರವಾನೆಯಾಗುತ್ತದೆ. ಹೀಗಾಗಿ ಅದಷ್ಟು ಬೇಗ ಸಮಸ್ಯೆ ಪರಿಹಾರಕ್ಕೆ ಯತ್ನಿಸುವಂತೆ ಮೋದಿಗೆ ಮನವಿ ಮಾಡಿದ್ದಾರೆ.
ವಾಣಿಜ್ಯ ಸೌಲಭ್ಯ ಒಪ್ಪಂದ(ಟ್ರೇಡ್ ಫೆಸಿಲಿಟೇಷನ್ ಎಗ್ರಿಮೆಂಟ್)ಕ್ಕೆ ಭಾರತ ಸಹಿ ಹಾಕದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ ಮತ್ತು ಇದು ಪ್ರಧಾನಿ ಮೋದಿ ಬಗ್ಗೆ ತಪ್ಪು ಸಂದೇಶ ರವಾನಿಸುತ್ತದೆ ಎಂದು ಕೆರ್ರಿ-ಮೋದಿ ಭೇಟಿ ಬಳಿಕ ಅಮೆರಿಕದ ಅಧಿಕಾರಿಗಳು ವರದಿಗಾರರಿಗೆ ತಿಳಿಸಿದ್ದಾರೆ.
ಆಹಾರ ಸಬ್ಸಿಡಿಯನ್ನೇ ತೆಗೆದು ಹಾಕಿ ಎಂಬ ಅಮೆರಿಕದ ಸವಾಲಿಗೆ ಭಾರತ ಸಿಡಿದು ನಿಂತಿರುವುದರಿಂದ ಜಿನೀವಾದಲ್ಲಿನ ಡಬ್ಲ್ಯೂಟಿಒ ಮಾತುಕತೆ ಅರ್ಧಕ್ಕೇ ನಿಂತಿದೆ. ಈ ತಿಂಗಳ ಅಂತ್ಯದ ಒಳಗೆ ವಾಣಿಜ್ಯ ಸೌಲಭ್ಯ ಒಪ್ಪಂದ (ಟ್ರೇಡ್ ಫೆಸಿಲಿಟೇಷನ್ ಎಗ್ರಿಮೆಂಟ್)ಕ್ಕೆ ಅಂಗೀಕಾರ ಪಡೆಯಬೇಕಾಗಿದೆ. ಹೀಗಾಗಿ ಭಾರತ ಸೇರಿದಂತೆ ತೃತೀಯ ರಾಷ್ಟ್ರಗಳ ಮನವೊಲಿಸಲು ಇನ್ನಿಲ್ಲದ ಪ್ರಯತ್ನಗಳು ನಡೆಯುತ್ತಿವೆ. ಆಹಾರ ಭದ್ರತೆಗೆ ಸಂಬಂಧಿಸಿದಂತೆ ಕಾಯಂ ಪರಿಹಾರ ಕಂಡುಕೊಳ್ಳುವ ವರೆಗೆ ಒಪ್ಪಂದಕ್ಕೆ ಸಹಿ ಹಾಕುವುದಿಲ್ಲ ಎಂದು ಭಾರತ ಕಳೆದ ವಾರ ಜಿನೀವಾದಲ್ಲಿ ಸ್ಪಷ್ಟವಾಗಿ ಸಾರಿತ್ತು.