ಮುಂಬೈ: ಮಹಿಳಾ ಕಂಡೆಕ್ಟರ್ ಜತೆ ಪ್ರಯಾಣಿಕನ ಅಸಭ್ಯ ವರ್ತನೆ
ಚಲಿಸುತ್ತಿದ್ದ ಬಸನ್ನು ಹತ್ತಿದ್ದಲ್ಲದೆ ಮಹಿಳಾ ನಿರ್ವಾಹಕಿಯೊಂದಿಗೆ...
ಥಾಣೆ: ಚಲಿಸುತ್ತಿದ್ದ ಬಸನ್ನು ಹತ್ತಿದ್ದಲ್ಲದೆ ಮಹಿಳಾ ನಿರ್ವಾಹಕಿಯೊಂದಿಗೆ ವಾಗ್ವಾದಕ್ಕಿಳಿದ ಪ್ರಯಾಣಿಕನೊಬ್ಬ ಆಕೆಯ ಬಟ್ಟೆಯನ್ನು ಬಿಚ್ಚಲು ಯತ್ನಿಸಿದ ಘಟನೆ ಥಾಣೆ ಜಿಲ್ಲೆಯ ಡೊಂಬಿವಿಲಿ ಪ್ರದೇಶದಲ್ಲಿ ಬುಧವಾರ ನಡೆದಿದೆ.
ಇಂದು ಬೆಳಗ್ಗೆ ಥಾಣೆ ಜಿಲ್ಲೆಯ ಕಲ್ಯಾಣ್ ಮತ್ತು ಪನ್ವೇಲ್ ನಡುವೆ ಸಾಗಿದ್ದ ಎಂಎಸ್ಆರ್ಟಿಸಿ ಬಸ್ ಡೊಂಬಿವಿಲಿ ರೈಲು ನಿಲ್ದಾಣದತ್ತ ಪ್ರಯಾಣಿಸಿತ್ತು. ಈ ವೇಳೆ ಬಸ್ ಚಲಿಸುತ್ತಿರುವಾಗಲೇ ಹತ್ತಿದ 30 ವರ್ಷ ವಯಸ್ಸಿನ ಅಭಿಷೇಕ್ ಸಿಂಗ್ ಎಂಬಾತ ನಿರ್ವಾಹಕಿಯ ಜತೆ ಅಸಭ್ಯವಾಗಿ ವರ್ತಿಸಿದ್ದಲ್ಲದೆ ಕೋಪದ ಭರದಲ್ಲಿ ಆಕೆಯ ಬಟ್ಟೆಯನ್ನು ಬಿಚ್ಚಲು ಯತ್ನಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ನಿರ್ವಾಹಕಿಯೊಂದಿಗೆ ಅಸಭ್ಯವಾಗಿ ವರ್ತಿಸುತ್ತಿದ್ದ ಪ್ರಯಾಣಿಕನನ್ನು ಅದೇ ಬಸ್ನಲ್ಲಿದ್ದ ಕೆಲ ಕಾಲೇಜು ವಿದ್ಯಾರ್ಥಿಗಳು ಮಧ್ಯಪ್ರವೇಶಿಸಿ ಆತನಿಗೆ ಚನ್ನಾಗಿ ಥಳಿಸಿ ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ. ಇತನ ವಿರುದ್ಧ ಭಾರತೀಯ ದಂಡ ಸಂಹಿತೆ ಸೆಕ್ಷನ್ 353, 354, 504 ಮತ್ತು 323 ಅಡಿಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ