ಶ್ರೀಲಂಕಾ: 33 ಭಾರತೀಯ ಮೀನುಗಾರರ ಬಿಡುಗಡೆ
ವಿಶ್ವ ಕಡಲ ಗಡಿಯನ್ನು ಅಕ್ರಮವಾಗಿ ದಾಟಿದ ಆರೋಪದಡಿ...
ಶ್ರೀಲಂಕಾ: ವಿಶ್ವ ಕಡಲ ಗಡಿಯನ್ನು ಅಕ್ರಮವಾಗಿ ದಾಟಿದ ಆರೋಪದಡಿ ಬಂಧನಕ್ಕಿಡಗಿದ್ದ 33 ಭಾರತೀಯ ಮೀನುಗಾರರನ್ನು ಶ್ರೀಲಂಕಾ ಸರ್ಕಾರ ಗುರುವಾರ ಬಿಡುಗಡೆ ಮಾಡಿದೆ.
ಭಾರತ ಜತೆಗಿನ ಬಾಂಧವ್ಯ ವೃದ್ಧಿ ಸಲುವಾಗಿ ಶ್ರೀಲಂಕಾ ಅಧ್ಯಕ್ಷ ಮಹಿಂದಾ ರಾಜಪಕ್ಸೆ ಅವರು 33 ಭಾರತೀಯ ಮೀನುಗಾರರ ಬಿಡುಗಡೆಗೆ ಆದೇಶಿಸಿದ್ದಾರೆ.
ದೇಶದ ನೂತನ ಪ್ರಧಾನಿಯಾಗಿ ನರೇಂದ್ರ ಮೋದಿ ಪದಗ್ರಹಣ ಸಮಾರಂಭಕ್ಕೆ ಹಾಜರಾಗುವಂತೆ ಸಾರ್ಕ್ ದೇಶಗಳ ನಾಯಕರಿಗೆಲ್ಲ ಆಹ್ವಾನ ನೀಡಿತ್ತು. ಈ ಆಹ್ವಾನವನ್ನು ಮನ್ನಿಸಿ ಪಾಕಿಸ್ತಾನ ಪ್ರಧಾನಿ ನವಾಜ್ ಷರೀಫ್ ಮತ್ತು ಮಹಿಂದಾ ರಾಜಪಕ್ಸೆ ಪಾಲ್ಗೊಳ್ಳುವ ಹಿನ್ನೆಲೆಯಲ್ಲಿ ಭಾರತೀಯ ಮೀನುಗಾರರನ್ನು ಬಿಡುಗಡೆ ಮಾಡಲು ಎರಡು ನೆರೆಯ ರಾಜ್ಯಗಳು ಮನಸ್ಸು ಮಾಡಿತ್ತು. ಅದರಂತೆ ಮೇ 25ರಂದೇ ಪಾಕಿಸ್ತಾನ ಸರ್ಕಾರ 151 ಮೀನುಗಾರರನ್ನು ಬಿಡುಗಡೆ ಮಾಡಿತ್ತು.
ಮತ್ತೊಂದೆಡೆ ಭಾರತೀಯ ಮೀನುಗಾರರ ಬಿಡುಗಡೆಗೆ ಮನಸ್ಸು ಮಾಡಿದ್ದ ಶ್ರೀಲಂಕಾ ಸಹ ಇಂದು 33 ಮೀನುಗಾರರನ್ನು ಬಿಡುಗಡೆ ಮಾಡಿದೆ.