ಗಡ್ಕರಿ ಮಾನನಷ್ಟ ಪ್ರಕರಣ: ಕೇಜ್ರಿವಾಲ್ ವಿರುದ್ಧ ಚಾರ್ಜ್‌ಶೀಟ್ ದಾಖಲು
ನವದೆಹಲಿ: ಕೇಂದ್ರ ಸಾರಿಗೆ ಸಚಿವ ನಿತೀನ್ ಗಡ್ಕರಿ ವಿರುದ್ಧ ಭ್ರಷ್ಟಾಚಾರ ಆರೋಪ ಮಾಡಿದ್ದ ಎಎಪಿ ಮುಖ್ಯಸ್ಥ ಹಾಗೂ ದೆಹಲಿ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ವಿರುದ್ಧ ಪಟಿಯಾಲಾ ಕೋರ್ಟ್ ನಲ್ಲಿ ಶುಕ್ರವಾರ ಚಾರ್ಜ್‌ಶೀಟ್ ದಾಖಲಾಗಿದೆ.
ಗಡ್ಕರಿ ವಿರುದ್ಧ ಭ್ರಷ್ಟಾಚಾರ ಆರೋಪ ಮಾಡಿದ್ದ ಕೇಜ್ರಿವಾಲ್ ವಿರುದ್ಧ ನಿತೀನ್ ಗಡ್ಕರಿ ಅವರು ಮಾನನಷ್ಟ ಮೊಕದ್ದಮೆ ಪ್ರಕರಣ ದಾಖಲಿಸಿದ್ದರು. ಇಂದು ದೆಹಲಿಯ ಪಟಿಯಾಲಾ ಕೋರ್ಟ್‌ನಲ್ಲಿ ಪ್ರಕರಣ ವಿಚಾರಣೆ ನಡೆಯಿತು. ವಿಚಾರಣೆಗೆ ಹಾಜರಾಗಿದ್ದ ಕೇಜ್ರಿವಾಲ್ ಹಾಗೂ ಗಡ್ಕರಿ ಅವರಿಗೆ ಪರಸ್ಪರ ಮಾತುಕತೆ ಮೂಲಕ ವಿವಾದನ್ನು ಬಗೆಹರಿಸಿಕೊಳ್ಳುವಂತೆ ಕೋರ್ಟ್ ಸೂಚಿಸಿತು. ಆದರೆ ಪ್ರಕರಣವನ್ನು ಹಿಂಪಡೆಯದ ಅರವಿಂದ್ ಕೇಜ್ರಿವಾಲ್ ನಿರಾಕರಿಸಿದರು. ಹೀಗಾಗಿ ಕೋರ್ಟ್ ಅರವಿಂದ್ ಕೇಜ್ರಿವಾಲ್ ವಿರುದ್ಧ ಐಪಿಸಿ ಸೆಕ್ಷನ್ 499 ಮತ್ತು 500ರಡಿ ಚಾರ್ಜ್‌ಶೀಟ್ ದಾಖಲು ಮಾಡಿದೆ.
ಕಳೆದ ಲೋಕಸಭಾ ಚುನಾವಣೆ ವೇಳೆ ಎಎಪಿ ಭ್ರಷ್ಟರ ಪಟ್ಟಿ ಬಿಡುಗಡೆ ಮಾಡಿತ್ತು. ಆ ಪಟ್ಟಿಯಲ್ಲಿ ನಿತೀನ್ ಗಡ್ಕರಿಯವರ ಅವರ ಹೆಸರಿದ್ದಿದ್ದರಿಂದ ಕೇಜ್ರಿವಾಲ್ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದರು. ಭ್ರಷ್ಟಾಚಾರ ಆರೋಪ ಕೈಬಿಡಲು ನಿರಾಕರಿಸಿದ ಕೇಜ್ರಿವಾಲ್ ವಿರುದ್ಧ ಮಾನನಷ್ಟ ಮೊಕದ್ದಮೆಯನ್ನು ಹಿಂಪಡೆಯಲಿಲು ಗಡ್ಕರಿಯವರು ನಿರಾಕರಿಸಿದ್ದಾರೆ.
ಪ್ರಕರಣ ವಿಚಾರಣೆಯನ್ನು ಕೋರ್ಟ್ ಆಗಸ್ಟ್ 2ಕ್ಕೆ ಮುಂದೂಡಿದ್ದು, ಮುಂದಿನ ವಿಚಾರಣೆ ವೇಳೆ ಗಡ್ಕರಿ ವಿರುದ್ಧದ ಭ್ರಷ್ಟಾಚಾರ ಆರೋಪವನ್ನು ಕೇಜ್ರಿವಾಲ್ ಸಾಭೀತು ಮಾಡಬೇಕು. ಒಂದು ವೇಳೆ ಆರೋಪ ಸಾಭೀತು ಮಾಡಲು ಸಾಧ್ಯವಾಗದೆ ಇದ್ದರೆ ಕೇಜ್ರಿವಾಲ್‌ಗೆ 2 ವರ್ಷ ಜೈಲು ಶಿಕ್ಷೆ ವಿಧಿಸುವ ಸಾಧ್ಯತೆ ಇದೆ.
ಮೇ 23 ರಂದು ನಡೆದ ವಿಚಾರಣೆ ವೇಳೆ ನ್ಯಾಯಾದೀಶರಾದ ಗೋಮತಿ ಮನೋಚ, 10 ಸಾವಿರ ವೈಯಕ್ತಿಕ ಬಾಂಡ್ ನೀಡಿ ಜಾಮೀನು ಪಡೆಯುವಂತೆ ಕೇಜ್ರಿವಾಲ್‌ಗೆ ಸೂಚಿಸಿದರು. ಆದರೆ, ಅವರು ಅದಕ್ಕೆ ಒಪ್ಪಲಿಲ್ಲ. ನಾನೇಕೆ ಜಾಮೀನು ಪಡೆಯಲಿ ಎಂದು ಪ್ರಶ್ನಿಸಿದರು. ಅನಿವಾರ್ಯವಾಗಿ ನ್ಯಾಯಾಧೀಶರು ೧೪ ದಿನಗಳ ನ್ಯಾಯಾಂಗ ಬಂಧನಕ್ಕೆ ಆದೇಶಿಸಿದ್ದರು.