ಜೋಶಿ, ಕಲ್ಯಾಣ್, ಯಶವಂತ್ ಸಿನ್ಹಾಗೆ ರಾಜ್ಯಪಾಲ ಹುದ್ದೆ?
ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವ..
ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ಅಧಿಕಾರಕ್ಕೆ ಬಂದು ಎರಡು ವಾರ ಕಳೆಯುತ್ತಿದ್ದಂತೆ ಸಚಿವ ಸ್ಥಾನ ವಂಚಿತ ಪಕ್ಷದ ಹಿರಿಯ ನಾಯಕರಿಗೆ ಸ್ಥಾನ ಕಲ್ಪಿಸಲು ಮುಂದಾಗಿದೆ.
ಈ ಹಿಂದೆ ಯುಪಿಎ ಸರ್ಕಾರದ ಅವಧಿಯಲ್ಲಿ ನೇಮಕಗೊಂಡಿದ್ದ ರಾಜ್ಯಪಾಲರನ್ನು ಬದಲಾವಣೆ ಮಾಡಿ, ಆ ಸ್ಥಾನಗಳಿಗೆ ಬಿಜೆಪಿಯ ಹಿರಿಯ ನಾಯಕರಾದ ಮುರಳಿ ಮನೋಹರ್ ಜೋಶಿ, ಕಲ್ಯಾಣ್ ಸಿಂಗ್ ಹಾಗೂ ಯಶವಂತ್ ಸಿನ್ಹಾ ಅವರನ್ನು ನೇಮಕ ಮಾಡುವ ಸಾಧ್ಯತೆ ಇದೆ ಎಂದು ಪಕ್ಷದ ಉನ್ನತ ಮೂಲಗಳು ತಿಳಿಸಿವೆ.
ಈ ಸಂಬಂಧ ಕೇಂದ್ರ ಗೃಹ ಸಚಿವಾಲಯ ಈಗಾಗಲೇ ಈ ವರ್ಷ ನಿವೃತ್ತಿಯಾಗುತ್ತಿರುವ ರಾಜ್ಯಪಾಲರ ಪಟ್ಟಿಯನ್ನು ಪ್ರಧಾನಮಂತ್ರಿಗಳ ಕಚೇರಿಗೆ ರವಾನಿಸಿದೆ. ಅಲ್ಲದೆ ಈ ಸಂಬಂಧ ನಿನ್ನೆ ಸಭೆ ನಡೆಸಿದ್ದ ಗೃಹ ಸಚಿವಾಲಯ, ಬಿಜೆಪಿ ಹಿರಿಯ ನಾಯಕರಿಗೆ ರಾಜ್ಯಪಾಲರ ಹುದ್ದೆ ನೀಡುವ ಬಗ್ಗೆ ಚರ್ಚಿಸಿದೆ ಎನ್ನಲಾಗಿದೆ.
ಈ ವರ್ಷಾಂತ್ಯಕ್ಕೆ ಚುನಾವಣೆ ಎದುರಿಸುತ್ತಿರುವ ಮಹಾರಾಷ್ಟ್ರ, ಉತ್ತರ ಪ್ರದೇಶ ಹಾಗೂ ಬಿಹಾರದ ರಾಜ್ಯಪಾಲರನ್ನು ಶೀಘ್ರವೇ ಬದಲಾವಣೆ ಮಾಡಲು ಕೇಂದ್ರ ಸರ್ಕಾರ ಮುಂದಾಗಿದ್ದು, ಮಹಾರಾಷ್ಟ್ರ ರಾಜ್ಯಪಾಲರ ಹುದ್ದೆಗೆ ಮುರಳಿ ಮನೋಹರ್ ಜೋಶಿ ಅವರ ಹೆಸರು ಪ್ರಮುಖವಾಗಿ ಕೇಳಿಬರುತ್ತಿದೆ.
ಇನ್ನು ಕೇಂದ್ರ ಸಚಿವ ಸ್ಥಾನ ವಂಚಿತ ಕಲ್ಯಾಣ್ ಸಿಂಗ್ ಹಾಗೂ ಯಶವಂತ್ ಸಿನ್ಹಾ ಅವರನ್ನು ಉತ್ತರ ಪ್ರದೇಶ ಹಾಗೂ ಬಿಹಾರದ ರಾಜ್ಯಪಾಲರನ್ನಾಗಿ ನೇಮಕ ಮಾಡುವ ಸಾಧ್ಯತೆ ಇದೆ.