ಬದೌನ್ ಗ್ಯಾಂಗ್‌ರೇಪ್: 42 ಐಪಿಎಸ್, 4 ಐಜಿಗಳ ವರ್ಗಾವಣೆ
ಲಖನೌ: ಉತ್ತರಪ್ರದೇಶದ ಬದೌನ್ ಜಿಲ್ಲೆಯಲ್ಲಿನ ಇಬ್ಬರು ಬಾಲಕಿಯರ ಮೇಲಿನ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ 42 ಐಪಿಎಸ್ ಅಧಿಕಾರಿಗಳು ಹಾಗೂ ನಾಲ್ವರು ಐಜಿಪಿ ಅಧಿಕಾರಿಗಳನ್ನು ಮುಖ್ಯಮಂತ್ರಿ ಅಖಿಲೇಶ್ ಸರ್ಕಾರ ಶನಿವಾರ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.
15 ದಿನಗಳಿಂದ ರಾಜ್ಯದಲ್ಲಿ ನಿರಂತರವಾಗಿ ಅತ್ಯಾಚಾರ ಪ್ರಕರಣಗಳು ಬಯಲಿಗೆ ಬರುತ್ತಿದ್ದು, ಅಖಿಲೇಶ್ ಯಾದವ್ ಸರ್ಕಾರದ ವಿರುದ್ಧ ಟೀಕೆಗಳು ಕೇಳಿಬಂದಿತ್ತು. ಇದೀಗ ಎಚ್ಚೆತ್ತಿರುವ ಸರ್ಕಾರ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಠಿಯಿಂದ 42 ಐಪಿಎಸ್ ಅಧಿಕಾರಿಗಳು, ನಾಲ್ವರು ಐಜಿಪಿ ಹಾಗೂ 10 ಡಿಐಜಿಪಿ ಅಧಿಕಾರಿಗಳನ್ನು ಎತ್ತಂಗಡಿ ಮಾಡಿದ್ದು, ಪ್ರಕರಣ ಸಂಬಂಧ ಬದೌನ್ ಜಿಲ್ಲೆಯ ಎಸ್‌ಪಿಯನ್ನು ಅಮಾನತು ಮಾಡಿದೆ.
ಮೇ 27ರಂದು 14 ಮತ್ತು 15ರ ಹರೆಯದ ಇಬ್ಬರು ಬಾಲಕಿಯರ ಅಪಹರಣ ಮಾಡಿದ್ದ ಏಳು ಮಂದಿ ದುಷ್ಕರ್ಮಿಗಳು ಅವರ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ, ಹತ್ಯೆಗೈದ್ದು, ಉಷ್ನೆಥ್ ಎಂಬಲ್ಲಿ ಶವಗಳನ್ನು ಮರಕ್ಕೆ ನೇಣು ಹಾಕಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಐವರನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದು, ಅದರಲ್ಲಿ ಸರ್ವೇಶ್ ಯಾದವ್ ಮತ್ತು ಛತ್ರಪಾಲ್ ಯಾದವ್ ಎಂಬ ಇಬ್ಬರು ಪೊಲೀಸ್ ಪೇದೆಗಳು ಸೇರಿದಂತೆ ಪಪ್ಪು, ಅವ್‌ದೇಶ್ ಯಾದವ್ ಉರ್ವೇಶ್ ಯಾದವ್ ಆರೋಪಿಗಳು.
ಡಿಸೆಂಬರ್ 16ರ ದೆಹಲಿ ಗ್ಯಾಂಗ್‌ರೇಪ್‌ನಂತೆ ಬದೌನ್ ಬಾಲಕಿಯರ 'ಅತ್ಯಾ'ಚಾರ ಪ್ರಕರಣ ದೇಶಾವ್ಯಾಪ್ತಿ ಸಂಚಲನ ಮೂಡಿಸಿತ್ತು. ಅಲ್ಲದೆ ಅತ್ಯಾಚಾರ ಪ್ರಕರಣಗಳನ್ನು ಖಂಡಿಸಿ ದೇಶವ್ಯಾಪ್ತಿ ಆಕ್ರೋಶ ವ್ಯಕ್ತವಾಗಿದ್ದವು. ಉತ್ತರಪ್ರದೇಶದಲ್ಲಿ ಮಹಿಳೆಯರಿಗೆ ಸುರಕ್ಷತೆ ನೀಡುವಲ್ಲಿ ಸಿಎಂ ಅಖಿಲೇಶ್ ಸರ್ಕಾರದ ಸೋತ್ತಿದೆ ಎಂಬ ಆರೋಪಗಳು ಕೇಳಿ ಬಂದಿದ್ದವು.