ಜಂಟಿ ಅಧಿವೇಶನ ಉದ್ದೇಶಿಸಿ ರಾಷ್ಟ್ರಪತಿ ಭಾಷಣ: ಬಡವರಿಗಾಗಿ ನನ್ನ ಸರ್ಕಾರ ಮೀಸಲು
ಬಡತನ ನಿರ್ಮೂಲನೆಗೆ ನನ್ನ ಸರ್ಕಾರದ ಬದ್ಧವಾಗಿದೆ. ಬಡವರಿಗಾಗಿಯೇ ನನ್ನ ಸರ್ಕಾರ ಮೀಸಲು. ಬಡತನಕ್ಕೆ...
ನವದೆಹಲಿ: ಬಡತನ ನಿರ್ಮೂಲನೆಗೆ ನನ್ನ ಸರ್ಕಾರದ ಬದ್ಧವಾಗಿದೆ. ಬಡವರಿಗಾಗಿಯೇ ನನ್ನ ಸರ್ಕಾರ ಮೀಸಲು. ಬಡತನಕ್ಕೆ ಧರ್ಮ ಇಲ್ಲ ಮತ್ತು ಹಸಿವಿಗೆ ಯಾವುದೇ ಜಾತಿ ಇಲ್ಲ ಎಂದು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಸೋಮವಾರ ಹೇಳಿದ್ದಾರೆ.
ಇಂದು ಸಂಸತ್ನ ಸೆಂಟ್ರಲ್ ಹಾಲ್ನಲ್ಲಿ 16ನೇ ಲೋಕಸಭೆಯ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಭಾಷಣ ಮಾಡಿದ ಪ್ರಣಬ್ ಮುಖರ್ಜಿ, ನರೇಂದ್ರ ಮೋದಿ ನೇತೃತ್ವದ ನೂತನ ಸರ್ಕಾರಕ್ಕೆ ಹಾಗೂ ಚುನಾವಣೆಯನ್ನು ಯಶಸ್ವಿಯಾಗಿ ನಡೆಸಿದ ಕೇಂದ್ರ ಚುನಾವಣಾ ಆಯೋಗಕ್ಕೆ ಅಭಿನಂದನೆ ಸಲ್ಲಿಸಿದರು. ಅಲ್ಲದೆ ಲೋಕಸಭೆಯಲ್ಲಿ ಮತ್ತೆ ಮಹಿಳೆ ಸ್ಪೀಕರ್ ಆಗಿರುವುದಕ್ಕೆ ಹೆಮ್ಮೆಯಾಗುತ್ತಿದೆ ಎಂದರು.
'ಏಕ್ ಭಾರತ್ ಶ್ರೇಷ್ಠ ಭಾರತ್' ಸರ್ಕಾರದ ಮಂತ್ರ, ಶ್ರೇಷ್ಠ ಭಾರತ ಪರವಾಗಿ ಈ ಬಾರಿ ಜನ ಮತ ಚಲಾಯಿಸಿದ್ದಾರೆ. 30 ವರ್ಷಗಳ ನಂತರ ಇಂತಹ ಜನಾದೇಶ ಬಂದಿದೆ ಎಂದು ಪ್ರಣಬ್ ಮುಖರ್ಜಿ ಹೇಳಿದರು,
ಬೆಲೆ ಏರಿಕೆ ನಿಯಂತ್ರಣ ಸರ್ಕಾರದ ಮೊದಲ ಆದ್ಯತೆಯಾಗಿದೆ ಮತ್ತು ಹೊಸ ಸರ್ಕಾರದಲ್ಲಿ ಭ್ರಷ್ಟಾಚಾರಕ್ಕೆ ಜಾಗವಿಲ್ಲ ಎಂಬ ನಿರೀಕ್ಷೆ ಇದೆ ಎಂದು ಪ್ರಣಬ್ ಮುಖರ್ಜಿ ತಿಳಿಸಿದರು.
ರಾಜ್ಯ ಮತ್ತು ಕೇಂದ್ರ ಸರ್ಕಾರದ ನಡುವೆ ಉತ್ತಮ ಬಾಂಧ್ಯವ ವೃದ್ಧಿ ಮಾಡುವ ಮೂಲಕ ಟೀಂ ಇಂಡಿಯಾದ ರೀತಿಯಲ್ಲಿ ಕೇಂದ್ರ ಸರ್ಕಾರ ಕಾರ್ಯ ನಿರ್ವಹಿಸಲಿದೆ ಎಂದು ರಾಷ್ಟ್ರಪತಿಗಳು ಹೇಳಿದರು.
ಮುಖರ್ಜಿ ಭಾಷಣದ ಪ್ರಮುಖ ಅಂಶಗಳು
ಶೀಘ್ರದಲ್ಲೇ ನೂತನ ಭೂ ಸುಧಾರಣಾ ನೀತಿ
ಶೀಘ್ರದಲ್ಲೇ ದೇಶದಲ್ಲಿ ಸ್ವಚ್ಛಭಾರತ ಆಂದೋಲನ
ವಿದ್ಯುತ್ ಸಮಸ್ಯೆ ನಿವಾರಣೆಗೆ ಅಗತ್ಯ ಕ್ರಮ
ಕಾಶ್ಮೀರ ಪಂಡಿತರ ಭದ್ರತೆಗೆ ಅಗತ್ಯ ಕ್ರಮ, ಜಮ್ಮು ಕಾಶ್ಮೀರ ಅಭಿವೃದ್ಧಿಗೆ ಒತ್ತು
ನ್ಯಾಯಾಂಗ ವ್ಯವಸ್ಥೆ ಚುರುಕುಗೊಳಿಸಲು ನೂತನ ಕ್ರಮ
ನೆರೆ ರಾಷ್ಟ್ರಗಳೊಂದಿಗೆ ಉತ್ತಮ ಬಾಂಧವ್ಯ ವೃದ್ಧಿಗೆ ಕ್ರಮ
ಚೀನಾದೊಂದಿಗೆ ಸಂಬಂಧ ಸುಧಾರಣೆಗೆ ಅಗತ್ಯ ಕ್ರಮ
ಭಯೋತ್ಪಾದನೆ, ಅಪರಾಧ ಪ್ರಕರಣಗಳಲ್ಲಿ ಯಾವುದೇ ರಾಜಿ ಇಲ್ಲ
ಹಿಮಾಲಯ ರಕ್ಷಣೆಗೆ ಕೇಂದ್ರ ಸರ್ಕಾರ ಬದ್ಧ
ಭಾರತದ ಎಲ್ಲಾ ಭಾಷೆಗಳ ಅಭಿವೃದ್ಧಿಗೆ ಕ್ರಮ
ಪ್ರತಿ ರಾಜ್ಯದಲ್ಲೂ ಐಐಟಿ, ಐಐಎಂ ಸ್ಥಾಪನೆ
ದೇಶಾದ್ಯಂತ 50 ಹೊಸ ಪ್ರವಾಸಿ ತಾಣಗಳ ನಿರ್ಮಾಣ