ಅತ್ಯಾಚಾರವನ್ನು ತಡೆಯಲು ಸಾಧ್ಯವಿಲ್ಲ: ಆರ್‌ಆರ್ ಪಾಟೀಲ್
ಮನೆಗೊಬ್ಬ ಪೊಲೀಸ್ ಪೇದೆಯನ್ನು ನೇಮಕ ಮಾಡಿದರೂ ಅತ್ಯಾಚಾರ...
ಮುಂಬೈ: ಮನೆಗೊಬ್ಬ ಪೊಲೀಸ್ ಪೇದೆಯನ್ನು ನೇಮಕ ಮಾಡಿದರೂ ಅತ್ಯಾಚಾರ ಪ್ರಕರಣಗಳನ್ನು ತಡೆಯಲು ಸಾಧ್ಯವಿಲ್ಲ ಎಂದು ಮಹಾರಾಷ್ಟ್ರದ ಗೃಹ ಸಚಿವ ಆರ್ ಆರ್ ಪಾಟೀಲ್ ಹೇಳಿದ್ದಾರೆ.
ಮಹಾರಾಷ್ಟ್ರದಲ್ಲಿ ಮಹಿಳಾ ಸುರಕ್ಷತೆ ಬಗ್ಗೆ ಸಮಾಜದಲ್ಲಿ ಚರ್ಚೆಯಾಗುತ್ತಿದ್ದರೇ, ಇತ್ತ ಆರ್ ಆರ್ ಪಾಟೀಲ್ ಅವರು ಮಹಿಳೆಯರ ಮೇಲೆ ನಡೆಯುವ ಅತ್ಯಾಚಾರವನ್ನು ತಡೆಯಲು ಸಾಧ್ಯವಿಲ್ಲ ಎಂದು ಹೇಳುವ ಮೂಲಕ ವಿವಾದಕ್ಕೀಡಾಗೀದ್ದಾರೆ.
ಸಚಿವ ಸಂಪುಟ ಸಭೆಯಲ್ಲಿ ವಿರೋಧ ಪಕ್ಷಗಳು ಮಹಿಳಾ ಸುರಕ್ಷಿತ ಬಗ್ಗೆ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸುತ್ತಿದ್ದರು. ಈ ವೇಳೆ ಮಾತನಾಡಿದ ಪಾಟೀಲ್, ಮನೆಗೊಬ್ಬ ಪೊಲೀಸರನ್ನು ನೇಮಕ ಮಾಡಿದರೂ, ಅತ್ಯಾಚಾರವನ್ನು ತಡೆಯಲು ಸಾಧ್ಯವಿಲ್ಲ ಎಂದು ಹೇಳಿಕೆ ನೀಡಿದ್ದಾರೆ.
ಈಗಿನ ಕಾಲದಲ್ಲಿ ಶೇಕಡಾ 6.34ರಷ್ಟು ಅತ್ಯಾಚಾರಗಳನ್ನು ಸಹೋದರರು ಹಾಗೂ ತಂದೆಯರೇ ಮಾಡುತ್ತಿದ್ದಾರೆ. ಇನ್ನು ಶೇಕಡಾ 6.65ರಷ್ಟು ಅತ್ಯಾಚಾರಗಳನ್ನು ಹತ್ತಿರ ಸಂಬಂಧಿಗಳೇ ಮಾಡಿರುತ್ತಾರೆ. ಶೇಕಡಾ 42 ರಷ್ಟು ಪರಿಚಿತರು ಅತ್ಯಾಚಾರವೆಸಗಿದ್ದರೇ, ಶೇ.40ರಷ್ಟು ಆಕರ್ಷಣೆಯಿಂದ ಅತ್ಯಾಚಾರಕ್ಕೀಡಾಗಿದ್ದಾರೆ.
ಹೀಗಿರಬೇಕಾದರೇ, ಅತ್ಯಾಚಾರವನ್ನು ತಡೆಯಲು ಹೇಗೆ ಸಾಧ್ಯ. ಬೇರೆ ರಾಜ್ಯಗಳಿಗೆ ಹೋಲಿಸಿದರೇ ಮಹಾರಾಷ್ಟ್ರದಲ್ಲೇ ಅತ್ಯಾಚಾರ ಪ್ರಕರಣಗಳು ಕಡಿಮೆ ಎಂದು ಪಾಟೀಲ್ ಹೇಳಿದ್ದಾರೆ.
ಮಹಿಳೆಯರಿಗೆ ಸುರಕ್ಷೆ ನೀಡಿ ಎಂದರೇ, ಯಾರ್ಯಾರು ಅತ್ಯಾಚಾರ ಮಾಡುತ್ತಾರೆ ಎಂದು ಹೇಳಿಕೆ ನೀಡುತ್ತಾ, ಪರೋಕ್ಷವಾಗಿ ಮಹಿಳೆಗೆ ಪೂರ್ಣ ರೀತಿಯಲ್ಲಿ ಸುರಕ್ಷೆ ಕಲ್ಪಿಸಲು ಸಾಧ್ಯವಿಲ್ಲ ಎಂದು ಪಾಟೀಲ್ ಹೇಳಿಕೊಂಡಂತಿದೆ.