ಮನಾಲಿ ದುರಂತ: ವಿದ್ಯಾರ್ಥಿಗಳು ನೀರುಪಾಲಾಗುತ್ತಿರುವ ವಿಡಿಯೋ ಲಭ್ಯ
ಹಿಮಾಚಲ ಪ್ರದೇಶದ ಮಂಡಿಯಲ್ಲಿ ಕಳೆದ ಭಾನುವಾರ ಪ್ರವಾಹದಲ್ಲಿ ಕೊಚ್ಚಿಹೋಗಿರುವ ಹೈದರಾಬಾದ್‌ನ ವಿಜ್ಞಾನ...
ಮಂಡಿ: ಹಿಮಾಚಲ ಪ್ರದೇಶದ ಮಂಡಿಯಲ್ಲಿ ಕಳೆದ ಭಾನುವಾರ ಪ್ರವಾಹದಲ್ಲಿ ಕೊಚ್ಚಿಹೋಗಿರುವ ಹೈದರಾಬಾದ್‌ನ ವಿಜ್ಞಾನ ಕಾಲೇಜ್‌ನ ವಿದ್ಯಾರ್ಥಿಗಳ ಪತ್ತೆಗಾಗಿ ಶೋಧ ಕಾರ್ಯ ಬುಧವಾರವೂ ಮುಂದುವರೆದಿದ್ದು, ಒಟ್ಟು 633 ರಕ್ಷಣಾ ಸಿಬ್ಬಂದಿಗಳು ಶೋಧ ಕಾರ್ಯದಲ್ಲಿ ತೊಡಗಿದ್ದಾರೆ.
ಈ ನಡುವೆ ವಿದ್ಯಾರ್ಥಿಗಳು ನೀರುಪಾಲಾಗುವ ಕೆಲವೇ ಕ್ಷಣಗಳ ಮುನ್ನ ತೆಗೆದ ವಿಡಿಯೋ ಮಾಧ್ಯಮಕ್ಕೆ ಲಭ್ಯವಾಗಿದ್ದು, ವಿಡಿಯೋ ದೃಶ್ಯಾವಳಿಗಳು ಮನಕಲುಕುವಂತಿವೆ. ವಿಡಿಯೋದಲ್ಲಿ ವಿದ್ಯಾರ್ಥಿಗಳು ಬಿಯಾಸ್ ನದಿಯ ಮಧ್ಯಭಾಗಕ್ಕೆ ತೆರಳಿ, ಖುಷಿಯಿಂದ ಫೋಟೋ ತೆಗೆದುಕೊಳ್ಳುತ್ತಿದ್ದ ಸಂದರ್ಭದಲ್ಲಿ ದಿಢೀರನೇ ಬಂದ ಭಾರಿ ಪ್ರಮಾಣದ ನಿರೀನ ಸೆಳೆತಕ್ಕೆ ಸಿಕ್ಕು ಕೊಚ್ಚಿ ಹೋಗುತ್ತಾರೆ.
ಕಳೆದ ಭಾನುವಾರ ಸಿಬ್ಬಂದಿ ಸೇರಿದಂತೆ 60 ಎಂಜಿನಿಯರಿಂಗ್ ವಿದ್ಯಾರ್ಥಿಗಳು ಮನಾಲಿಗೆ ಪ್ರವಾಸಕ್ಕೆ ತೆರಳಿದ್ದರು. ಈ ಪೈಕಿ 24 ವಿದ್ಯಾರ್ಥಿಗಳು ನೀರುಪಾಲಾಗಿದ್ದು, ಕಳೆದ ಸೋಮವಾರ ಐವರ ಮೃತದೇಹ ಪತ್ತೆಯಾಗಿದೆ.
ಹಿಮಾಚಲಪ್ರದೇಶ ಮುಖ್ಯಮಂತ್ರಿ ವೀರಭದ್ರ ಸಿಂಗ್ ಅವರು ಪ್ರಕರಣದ ಬಗ್ಗೆ ಮ್ಯಾಜಿಸ್ಟ್ರೇಟ್ ತನಿಖೆಗೆ ಆದೇಶಿಸಿದ್ದಾರೆ. ಜತೆಗೆ ಲಾರ್ಜಿ ಜಲವಿದ್ಯುತ್ ಯೋಜನೆಯ ಇಬ್ಬರು ಹಿರಿಯ ಎಂಜಿನಿಯರ್ಗಳು ಹಾಗೂ ಒಬ್ಬ ಫಿಟ್ಟರ್ನನ್ನು ಅಮಾನತು ಮಾಡಿದ್ದಾರೆ. ಇದೇ ವೇಳೆ, ದುರಂತದ ಬಗ್ಗೆ ವರದಿ ನೀಡುವಂತೆ ರಾಜ್ಯ ಸರ್ಕಾರಕ್ಕೆ ಕೇಂದ್ರ ಗೃಹ ಸಚಿವಾಲಯ ಸೂಚಿಸಿದೆ.
ಡ್ಯಾಂ ಅಧಿಕಾರಿಗಳ ವಿರುದ್ಧ ಎಫ್‌ಐಆರ್
ಸೂಚನೆ ನೀಡದೇ ನದಿಗೆ ನೀರು ಬಿಟ್ಟಿದ್ದಕ್ಕಾಗಿ ಲಾರ್ಜಿ ಡ್ಯಾಂ ಅಧಿಕಾರಿಗಳ ವಿರುದ್ಧ ಹಿಮಾಚಲ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.
ವಿಡಿಯೋ ಕೃಪೆ: amarujala.com