ಉ.ಪ್ರದೇಶದಲ್ಲಿ ಕಾನೂನು ವ್ಯವಸ್ಥೆ ಉತ್ತಮವಾಗಿದೆ: ಅಖಿಲೇಶ್
ಉತ್ತರಪ್ರದೇಶದಲ್ಲಿ ನಡೆಯುತ್ತಿರುವ ಅಪರಾಧ ಕುರಿತು ಹೆಚ್ಚು ವಿರೋಧ...
ಲಖನೌ: ಉತ್ತರಪ್ರದೇಶದಲ್ಲಿ ನಡೆಯುತ್ತಿರುವ ಅಪರಾಧ ಕುರಿತು ಹೆಚ್ಚು ವಿರೋಧ ವ್ಯಕ್ತವಾಗುತ್ತಿರುವುದಕ್ಕೆ ಪ್ರತಿಕ್ರಯಿಸಿರುವ ಮುಖ್ಯಮಂತ್ರಿ ಅಖಿಲೇಶ್ ಯಾದವ್, ಇತರೆ ರಾಜ್ಯಗಳಿಗೆ ಹೋಲಿಸಿದರೆ, ನಮ್ಮ ರಾಜ್ಯದಲ್ಲೇ ಹೆಚ್ಚು ಕಾನೂನು ಕಾಪಾಡಿಕೊಳ್ಳಲಾಗುತ್ತಿದೆ ಎಂದು ಹೇಳಿದ್ದಾರೆ.
ಇತ್ತೀಚೆಗೆ ದಲಿತರ ಮೇಲೆ ನಡೆಯುತ್ತಿರುವ ದೌರ್ಜನ್ಯ ಹಾಗೂ ಮಹಿಳೆಯರ ಮೇಲಿನ ಅತ್ಯಾಚಾರ ಪ್ರಕರಣಗಳು ಹೆಚ್ಚಾಗಿ ವರದಿಯಾಗುತ್ತಿವೆ. ಈ ಸಂಬಂಧ ಸರಿಯಾಗಿ ಕಾನೂನು ಕ್ರಮ ಕೈಗೊಳ್ಳಿ ಎಂದು ಅಖಿಲೇಶ್ ನೇತೃತ್ವದ ಉತ್ತರಪ್ರದೇಶದ ಸರ್ಕಾರದ ಮೇಲೆ ಒತ್ತಡ ಹೇರಲಾಗುತ್ತಿದೆ.
ಉತ್ತರ ಪ್ರದೇಶದಲ್ಲಿ ಕಾನೂನು ಕಾಯ್ದೆಗಳಿಗೆ ಹೆಚ್ಚು ಒತ್ತು ನೀಡಲಾಗುತ್ತಿದೆ. ಬೇರೆ ರಾಜ್ಯಗಳಿಗೆ ಹೋಲಿಸಿದರೆ ನಮ್ಮ ರಾಜ್ಯದಲ್ಲೇ ಹೆಚ್ಚು ಸುರಕ್ಷೆ. ಕಾನೂನು ವ್ಯವಸ್ಥೆ ಉತ್ತಮವಾಗಿದೆ ಎಂದು ಅಖಿಲೇಶ್ ಹೇಳಿಕೊಂಡಿದ್ದಾರೆ.
ನಮ್ಮ ರಾಜ್ಯದಲ್ಲಿ ಹೆಚ್ಚು ಸುರಕ್ಷೆ ಇರುವುದರಿಂದ ಹೂಡಿಕೆದಾರರು ಬಂಡವಾಳ ಹೂಡಲು ಮುಂದಾಗಿದ್ದಾರೆ. ಇದರಿಂದ ತಿಳಿಯುತ್ತದೆ ನಮ್ಮ ರಾಜ್ಯದಲ್ಲಿ ಕಾನೂನು ಕಾಯ್ದೆಯನ್ನು ಉತ್ತಮಗೊಳಿಸಲಾಗಿದೆ ಎಂದು ಅಖಿಲೇಶ್ ತಿಳಿಸಿದ್ದಾರೆ.
ಕೈಗಾರಿಕೋದ್ಯಮದಲ್ಲಿ ಉತ್ತರಪ್ರದೇಶ ಬಹಳ ಮುಂದಿದೆ. ಕೈಗಾರಿಕೆಗಳಿಗಾಗಿ ನಮ್ಮ ಸರ್ಕಾರ 24 ಗಂಟೆಗಳ ಕಾಲ ವಿದ್ಯುತ್ ನೀಡಿದೆ. ಬಂಡವಾಳ ಹೂಡಿಕೆದಾರರಿಗೆ ಪ್ರೋತ್ಸಾಹ ನೀಡುತ್ತಿದೆ ಎಂದು ಹೇಳಿದ್ದಾರೆ.
ಆದರೆ ಮಹಿಳಾ ಸುರಕ್ಷೆ ಬಗ್ಗೆ ಉತ್ತರಪ್ರದೇಶದ ಸರ್ಕಾರ ಕೈಗೊಂಡಿರುವ ಕ್ರಮವೇನು ಎಂದು ಸರಿಯಾಗಿ ಅರ್ಥವಾಗಿಲ್ಲ. ಏಕೆಂದರೆ ಇಬ್ಬರು ಸಹೋದರಿಯರು ಅತ್ಯಾಚಾರಕ್ಕೊಳಗಾದ ಬೆನ್ನಲ್ಲೇ, ಅದೇ ಮಾದರಿಯಲ್ಲಿ ಅನೇಕ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಆದರೆ ಅದನ್ನು ತಡೆಯಲು ಆಗುತ್ತಿಲ್ಲ. ಹೀಗಾಗಿ ಕಾನೂನು ಇನ್ನು ಉತ್ತಮಗೊಳಿಸಬೇಕಿತ್ತು.
ಅಖಿಲೇಶ್ ಯಾದವ್ ಅವರ ಈ ಹೇಳಿಕೆ, ಸುರಕ್ಷೆಗೆ ಒತ್ತು ನೀಡುವ ಬದಲು, ಬೇರೆ ರಾಜ್ಯಗಳಿಗೆ ಹೋಲಿಸಿಕೊಂಡು ಆಡಳಿತ ನಡೆಸುತ್ತಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ.