ಕಾಫಿಶಾಪ್ ಪ್ರಕರಣ: ನಾಳೆ ಸರ್ಕಾರಕ್ಕೆ ಮಧ್ಯಂತರ ವರದಿ ಸಲ್ಲಿಕೆ
ಕಾಫಿಶಾಪ್‌ನಲ್ಲಿ ಯುವತಿ ಫೋಟೋ ಕ್ಲಿಕ್ಕಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ...
ಬೆಂಗಳೂರು: ಕಾಫಿಶಾಪ್‌ನಲ್ಲಿ ಯುವತಿ ಫೋಟೋ ಕ್ಲಿಕ್ಕಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ಸಿಐಡಿ ಅಧಿಕಾರಿಗಳು ನಾಳೆ ರಾಜ್ಯ ಸರ್ಕಾರಕ್ಕೆ ಮಧ್ಯಂತರ ವರದಿ ಸಲ್ಲಿಸಲಿದ್ದಾರೆ.
ನಾಳೆ ಸರ್ಕಾರಕ್ಕೆ 58 ಪುಟಗಳ ಮಧ್ಯಂತರ ವರದಿಯನ್ನು ಸಿಐಡಿ ಅಧಿಕಾರಿಗಳು ಸಲ್ಲಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಕಾಫಿಶಾಫ್‌ನಲ್ಲಿ ಎಡಿಜಿಪಿ ಡಾ.ಪಿ ರವೀಂದ್ರನಾಥ್ ನನ್ನ ಫೋಟೋ ಕ್ಲಿಕ್ಕಿಸಿದ್ದಾರೆಂದು ಯುವತಿ ದೂರು ನೀಡಿದ್ದಳು. ದೂರಿನ ಆಧಾರದ ಮೇರೆಗೆ ರವೀಂದ್ರನಾಥ್ ಅವರನ್ನು ವಿಚಾರಣೆಗೆ ಒಳಪಡಿಸಿದ ಪೊಲೀಸರು, ರವೀಂದ್ರನಾಥ್ ಮೊಬೈಲ್‌ನ್ನು ವಶಕ್ಕೆ ತೆಗೆದುಕೊಂಡಿದ್ದರು.
ಮೊಬೈಲ್‌ನಲ್ಲಿ ದೂರುದಾರ ಯುವತಿಯ ಫೋಟೋ ಪತ್ತೆಯಾಗಿದ್ದು, ಅಸಹ್ಯಕರ ಭಂಗಿಯ 2 ಫೋಟೋ ಪತ್ತೆಯಾಗಿದೆ. ಆದರೆ ಈ ಆರೋಪವನ್ನು ರವೀಂದ್ರನಾಥ್ ನಿರಾಕರಿಸಿದ್ದಾರೆ.
ಈ ಹಿನ್ನಲೆಯಲ್ಲಿ ಯಾರು ಫೋಟೋ ತೆಗೆದಿದ್ದಾರೆಂದು ಸಿಐಡಿ ಅಧಿಕಾರಿಗಳು ತನಿಖೆ ಮುಂದುವರೆಸಿದ್ದು, ಫೋರೆನ್ಸಿಕ್ ಲ್ಯಾಬ್‌ಗೆ ರವೀಂದ್ರನಾಥ್ ಮೊಬೈಲ್ ರವಾನೆ ಮಾಡಿದ್ದಾರೆ.
ಪ್ರಕರಣದಲ್ಲಿ ವ್ಯವಸ್ಥಿತ ಪಿತೂರಿ ನಡೆದಿದೆ ಎಂದು ಆರೋಪ ಮಾಡಿದ್ದ ರವೀಂದ್ರನಾಥ್, ನಗರ ಪೊಲೀಸ್ ಆಯುಕ್ತ ರಾಘವೇಂದ್ರ ಔರಾದ್ಕರ್ ವಿರುದ್ಧ ಜಾತಿನಿಂದನೆ ಪ್ರಕರಣ ದಾಖಲಿಸಿದ್ದರು.
ಈ ಸಂಬಂಧ ತನಿಖೆ ನಡೆಸಿರುವ ಸಿಐಡಿ, ರಾಘವೇಂದ್ರ ಔರಾದ್ಕರ್ ಅವರು ಡಾ.ರವೀಂದ್ರನಾಥ್‌ರನ್ನು ಅಸ್ಪೃಶ್ಯರಂತೆ ನಡೆಸಿಕೊಂಡಿಲ್ಲ ಎಂದು ಹೇಳಿದೆ.
ಸಿಐಡಿ ವರದಿಯಲ್ಲಿ ಜಾತಿ ನಿಂದನೆ ಪ್ರಕರಣ ಸಂಬಂಧ ಆಯುಕ್ತ ಔರಾದ್ಕರ್‌ಗೆ ಕ್ಲೀನ್‌ಚಿಟ್ ನೀಡಲಾಗಿದೆ ಎಂದು ತಿಳಿದು ಬಂದಿದೆ.