ಅತ್ಯಾಚಾರ ಪ್ರಕರಣ: ಸಚಿವ ನಿಹಾಲ್ ಚಂದ್ ರಾಜಿನಾಮೆ
ನವದೆಹಲಿ: ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಧಾನಮಂತ್ರಿ ನರೇಂದ್ರ ಮೋದಿ ಸಂಪುಟದ ರಸಗೊಬ್ಬರ ಖಾತೆ ರಾಜ್ಯ ಸಚಿವ ನಿಹಾಲ್ ಚಂದ್ ಮೇಘವಾಲ್ ಅವರು ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ.
ಮೋದಿ ಸಂಪುಟದ ಸಚಿವರೊಬ್ಬರು ಅತ್ಯಾಚಾರ ಪ್ರಕರಣದಲ್ಲಿ ಸಿಕ್ಕಿಬಿದ್ದಿರುವುದು ಬಿಜೆಪಿ ಸರ್ಕಾರಕ್ಕೆ ತೀವ್ರ ಮುಜುಗರಕ್ಕೆ ಗುರಿ ಮಾಡಿತ್ತು. ಈ ಮುಜುಗರದಿಂದ ತಪ್ಪಿಸಿಕೊಳ್ಳುವ ಸಲುವಾಗಿ ನಿಹಾಲ್ ಚಂದ್ ಅವರು ತಮ್ಮ ಸಚಿವ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ.
ನಾಲ್ಕು ವರ್ಷಗಳ ಹಳೆಯ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಪುರದ ಜಿಲ್ಲಾ ಕೋರ್ಟ್ ನಿಹಾಲ್ ಚಂದ್ ಅವರಿಗೆ ಖುದ್ದು ಕೋರ್ಟ್ಗೆ ಹಾಜರಾಗುವಂತೆ ನೋಟಿಸ್ ನೀಡಿತ್ತು.
ನಿಹಾಲ್ ಚಂದ್ ಅವರ ವಿರುದ್ಧ ಸ್ವತಃ ಅವರ ಪತ್ನಿಯೇ ಅತ್ಯಾಚಾರ ಪ್ರಕರಣ ದಾಖಲಿಸಿದ್ದರು. ನನ್ನ ಪತಿ ನನ್ನನ್ನು ಲೈಂಗಿಕ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿ 2011ರಲ್ಲಿ ಎಫ್ಐಆರ್ ದಾಖಲಿಸಿದ್ದರು. ಪತಿ ನಿಹಾಲ್ ಚಂದ್ ನನಗೆ ಮತ್ತು ಬರಿಸುವ ಔಷಧ ನೀಡಿ, ಅವರ ಸ್ನೇಹಿತರು ನನ್ನ ಮೇಲೆ ಅತ್ಯಾಚಾರ ಮಾಡಲು ಅವಕಾಶ ಮಾಡಿಕೊಟ್ಟಿದ್ದರು ಎಂದು ದೂರಿನಲ್ಲಿ ತಿಳಿಸಿದ್ದರು.
ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ನಿಹಾಲ್ ಚಂದ್ ಸೇರಿದಂತೆ ಇನ್ನು 17 ಮಂದಿಗೆ ಕೋರ್ಟ್ ನೋಟಿಸ್ ನೀಡಿದ್ದು, ಆಗಸ್ಟ್ 20ರೊಳಗೆ ಉತ್ತರಿಸುವಂತೆ ಸೂಚಿಸಿದೆ. ಏತನ್ಮಧ್ಯೆ ಸಚಿವ ನಿಹಾಲ್ ಚಂದ್ ಅವರು ಕೂಡಲೇ ವಜಾ ಮಾಡಬೇಕೆಂದು ಕಾಂಗ್ರೆಸ್ ಒತ್ತಾಯಿಸಿತ್ತು.