ಎಲ್ಪಿಜಿ ಸಿಲಿಂಡರ್ ದರ ಏರಿಕೆ ಇಲ್ಲ: ಪ್ರಧಾನ್
ಮನೆ ಬಳಕೆ ಎಲ್ಪಿಜಿ ಗ್ಯಾಸ್ ಸಿಲಿಂಡರ್ ದರ ಏರಿಕೆ ಸದ್ಯಕ್ಕೆ ಇಲ್ಲ ಮತ್ತು ಸಬ್ಸಿಡಿ ಮೂಲಕ ನೀಡುವ ಸಿಲಿಂಡರ್ಗಳ ಸಂಖ್ಯೆಯಲ್ಲೂ ಯಾವುದೇ..
ಪಾಟ್ನಾ: ಮನೆ ಬಳಕೆ ಎಲ್ಪಿಜಿ ಗ್ಯಾಸ್ ಸಿಲಿಂಡರ್ ದರ ಏರಿಕೆ ಸದ್ಯಕ್ಕೆ ಇಲ್ಲ ಮತ್ತು ಸಬ್ಸಿಡಿ ಮೂಲಕ ನೀಡುವ ಸಿಲಿಂಡರ್ಗಳ ಸಂಖ್ಯೆಯಲ್ಲೂ ಯಾವುದೇ ಏರಿಕೆ ಮಾಡುವುದಿಲ್ಲ ಎಂದು ಕೇಂದ್ರ ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಶುಕ್ರವಾರ ಹೇಳಿದ್ದಾರೆ.
ಗ್ರಾಹಕರಿಗೆ ನೀಡಲಾಗುವ ಎಲ್ಪಿಜಿಯನ್ನು ಪ್ರಸ್ತುತ ದರದಲ್ಲೇ ಮುಂದುವರಿಸಲಾಗುವುದು. ಗ್ರಾಹಕರ ಮೇಲೆ ಮತ್ತಷ್ಟು ಹೊರೆಯನ್ನು ಹೇರುವುದಿಲ್ಲ. ಸಬ್ಸಿಡಿ ಹಾಗೂ ಸಬ್ಸಿಡಿಯಲ್ಲಿ ನೀಡಲಾಗುತ್ತಿರುವ ಸಿಲಿಂಡರ್ಗಳ ಸಂಖ್ಯೆಯಲ್ಲಿ ಬದಲಾವಣೆ ಮಾಡುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಇನ್ನು ಪೆಟ್ರೋಲ್ ಹಾಗೂ ಡೀಸೆಲ್ ದರಗಳ ಬಗ್ಗೆ ಕೇಳಲಾದ ವರದಿಗಾರರ ಪ್ರಶ್ನೆಗೆ ಉತ್ತರಿಸಿದ ಪ್ರಧಾನ್, ಇದು ಸರ್ಕಾರದ ಮುಂದಿರುವ ದೊಡ್ಡ ಸವಾಲು. ಹಾಗಾಗಿ ಈ ವಿಷಯವನುಸರ್ಕಾರ ಗಂಭೀರವಾಗಿ ಪರಿಗಣಿಸಿದೆ ಎಂದರು.
ಪ್ರಸ್ತುತ ದೇಶದಲ್ಲಿ ತೈಲ ಹಾಗೂ ಅನಿಲದ ದರ ಏರಿಕೆಯಾಗಬೇಕಿದ್ದು, ಸರ್ಕಾರ ಅಥವಾ, ರೈತರ ಹಾಗೂ ಬಡವರ ಮೇಲೆ ಹೊರೆ ಬೀಳಲಿದೆ ಎಂದು ಪ್ರಧಾನ್ ತಿಳಿಸಿದ್ದಾರೆ.