ಎಸ್‌ಇಜಡ್ ಸಮಸ್ಯೆ: ಶನಿವಾರ ವಾಣಿಜ್ಯ ಅಧಿಕಾರಿಗಳೊಂದಿಗೆ ಪ್ರಧಾನಿ ಸಭೆ
ವಿಶೇಷ ಆರ್ಥಿಕ ವಲಯದಲ್ಲಿ(ಎಸ್‌ಇಜಡ್) ಎದುರಿಸಲಾಗುತ್ತಿರುವ ತೆರಿಗೆ ಪದ್ಧತಿ...
ನವದೆಹಲಿ: ವಿಶೇಷ ಆರ್ಥಿಕ ವಲಯದಲ್ಲಿ(ಎಸ್‌ಇಜಡ್) ಎದುರಿಸಲಾಗುತ್ತಿರುವ ತೆರಿಗೆ ಪದ್ಧತಿ ಹಾಗೂ ರಫ್ತು ಸೇರಿದಂತೆ ಇತರೆ ಸಮಸ್ಯೆ ಬಗ್ಗೆ ಚರ್ಚಿಸಲು ವಾಣಿಜ್ಯ ಅಧಿಕಾರಿಗಳು ಹಾಗೂ ಹಣಕಾಸು ಸಚಿವರೊಂದಿಗೆ ಶನಿವಾರ ಪ್ರಧಾನಿ ನರೇಂದ್ರ ಮೋದಿ ಸಭೆ ಕರೆದಿದ್ದಾರೆ.
ವಾಣಿಜ್ಯ ಇಲಾಖೆಯ ಕಾಯದರ್ಶಿ ರಾಜೀವ್ ಖೇರ್ ಮತ್ತು ಕಂದಾಯ ಇಲಾಖೆಯ ಕಾರ್ಯದರ್ಶಿ ರಾಜೀವ್ ಟಾಕ್ರು ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.
ವಿಶೇಷ ಆರ್ಥಿಕ ವಲಯದ ಮೇಲೆ ಹೇರಿರುವ ಕನಿಷ್ಟ ಪರ್ಯಾಯ ತೆರಿಗೆ(ಎಂಎಟಿ) ಸಮಸ್ಯೆ ಭಾರಿ ಪ್ರಭಾವ ಬೀರಿದ್ದು, ಸಣ್ಣ ಮತ್ತು ಮಧ್ಯಮ ಪ್ರಮಾಣದ ಐ.ಟಿ ಸಂಸ್ಥೆಗಳ ಮೇಲೆ ಹೆಚ್ಚಿನ ಹೊರೆ ಬೀಳುತ್ತಿದೆ. ಇದರಿಂದಾಗಿ ಉದ್ಯೋಗವಕಾಶ ಕಲ್ಪಿಸಲು ತೊಂದರೆಯಾಗುತ್ತಿದೆ.
ಅಲ್ಲದೇ ವಿದೇಶಿ ನೇರ ಬಂಡವಾಳ ಹೂಡಿಕೆಯಲ್ಲೂ ಸಮಸ್ಯೆ ಉಂಟಾಗಿದೆ. ಈ ಸಂಬಂಧ ಚರ್ಚೆ ನಡೆಸಲು ಪ್ರಧಾನಿ ಸಭೆ ಕರೆದಿದ್ದು, ಯೋಜನೆ ಬಗ್ಗೆ ಪೂರ್ಣ ವಿವರ ನೀಡುವಂತೆ ಸೂಚಿಸಿದ್ದಾರೆ.