ಛತ್ತೀಸ್‌ಗಡದ ಉಕ್ಕು ಕಾರ್ಖಾನೆ ಅನಿಲ ದುರಂತ: 7 ಸಾವು
ಛತ್ತೀಸ್‌ಗಢದಲ್ಲಿರುವ ಭಾರತ ಉಕ್ಕು ಪ್ರಾಧಿಕಾರ ಭಿಲಾಯ್ ಕಾರ್ಖಾನೆಯಲ್ಲಿ...
ರಾಯ್‌ಪುರ: ಛತ್ತೀಸ್‌ಗಢದಲ್ಲಿರುವ ಭಾರತ ಉಕ್ಕು ಪ್ರಾಧಿಕಾರ ಭಿಲಾಯ್ ಕಾರ್ಖಾನೆಯಲ್ಲಿ ಸಂಭವಿಸಿದ್ದ ಅನಿಲ ಸೋರಿಕೆ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 7ಕ್ಕೇರಿದೆ.
ನಿನ್ನೆ ಭಿಲಾಯ್ ಉಕ್ಕು ಸ್ಥಾವರದಲ್ಲಿ ವಿಷಕಾರಿ ಮಿಥೇನ್ ಅನಿಲ ಸೋರಿಕೆಯಾಗಿದ್ದರಿಂದ ಇಬ್ಬರು ಉಪ ಪ್ರಧಾನ ವ್ಯವಸ್ಥಾಪಕರು, ಐದು ಜನ ಕಾರ್ಮಿಕರು ಸೇರಿದಂತೆ ಒಟ್ಟು ಏಳು ಮಂದಿ ಅಸುನಿಗೀದ್ದು, 35 ಜನರ ಸ್ಥಿತಿ ಶೋಚನಿಯವಾಗಿದೆ. ಅಸ್ವಸ್ಥರನ್ನೆಲ್ಲ ಭಿಲಾಯ್‌ನ ಜವಾಹರ್‌ಲಾಲ್ ಆಸ್ಪತ್ರೆಗೆ ದಾಖಲಿಸಿದ್ದು, ತೀವ್ರವಾಗಿ ಅಸ್ವಸ್ಥರಾಗಿರುವವರನ್ನು ತುರ್ತು ನಿಗಾ ಘಟಕದಲ್ಲಿ ಇರಿಸಲಾಗಿದೆ ಎಂದು ತಿಳಿದುಬಂದಿದೆ.
ದುರಂತಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಛತ್ತೀಸ್‌ಗಡ ಮುಖ್ಯಮಂತ್ರಿ ರಮಣ್ ಸಿಂಗ್ ಅವರು ಘಟನೆ ಕುರಿತಂತೆ ವಿಷಾದ ವ್ಯಕ್ತಪಡಿಸಿದ್ದು, ಮೃತ ಕುಟುಂಬಕ್ಕೆ ಸಂತಾಪ ವ್ಯಕ್ತಪಡಿಸಿದ್ದಾರೆ.
ಘಟನಾ ಸ್ಥಳಕ್ಕೆ ಕೇಂದ್ರ ಉಕ್ಕು ಸಚಿವ ನರೇಂದ್ರ ಸಿಂಗ್ ತೋಮರ್ ಅವರು ಇಂದು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಘಟನೆಯ ಬಗ್ಗೆ ಸಮಗ್ರ ವರದಿ ನೀಡುವಂತೆ ಪ್ರಾಧಿಕಾರಕ್ಕೆ ಸೂಚಿಸಿದ್ದಾರೆ.
ವಿಷಕಾರಿ ಅನಿಲ ಸೋರಿಕೆ ದುರಂತ ಪ್ರಕರಣವನ್ನು ರಾಜ್ಯ ಸರ್ಕಾರ ದಂಡಾಧಿಕಾರಿಗಳ ತನಿಖೆಗೆ ಆದೇಶಿಸಿದೆ ಎಂದು ದುರ್ಗ್ ಜಿಲ್ಲಾಧಿಕಾರಿ ಆರ್. ಸಂಗೀತಾ ಅವರು ತಿಳಿಸಿದ್ದಾರೆ.