ಕರಾಳ ಹುಣ್ಣಿಮೆ ಎಫೆಕ್ಟ್: ನಗರದಲ್ಲಿ 10 ಮಂದಿ ಆತ್ಮಹತ್ಯೆಗೆ ಶರಣು
ಕೌಟುಂಬಿಕ ಕಲಹ ಹಾಗೂ ಅನಾರೋಗ್ಯದ ಹಿನ್ನೆಲೆಯಲ್ಲಿ ಮನನೊಂದು ಕಳೆದ...
ಬೆಂಗಳೂರು: ಕೌಟುಂಬಿಕ ಕಲಹ ಹಾಗೂ ಅನಾರೋಗ್ಯದ ಹಿನ್ನೆಲೆಯಲ್ಲಿ ಮನನೊಂದು ಕಳೆದ ರಾತ್ರಿ ನಗರದ ವಿವಿಧೆಡೆ 10 ಮಂದಿ ಆತ್ಮಹತ್ಯೆಗೆ ಶರಣಾಗಿದ್ದು, ಆರು ಮಹಿಳೆಯರು ಸೇರಿ ನಾಲ್ವರು ಪುರುಷರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ನಿನ್ನೆ ಕರಾಳ ಹುಣ್ಣಿಮೆಯಾಗಿದ್ದು ಇದರ ಬೆನ್ನಲ್ಲೇ ನೇಣು ಬಿಗಿದುಕೊಂಡು 9 ಜನ ಆತ್ಮಹತ್ಯೆ ಮಾಡಿಕೊಂಡಿರೇ ಓರ್ವ ಬಾಲಕಿ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಪ್ರಮುಖವಾಗಿ ನಗರದ ಶ್ರೀರಾಂಪುರದಲ್ಲಿ ಅತಿ ಹೆಚ್ಚು ಆತ್ಮಹತ್ಯೆ ಪ್ರಕರಣಗಳು ವರದಿಯಾಗಿವೆ.
ಶ್ರೀರಾಂಪುರದಲ್ಲಿ ಕೌಟುಂಬಿಕ ಕಲಹದಿಂದ ಹಾಗೂ ಹೊಟ್ಟೆ ನೋವು ತಡೆಯಲಾರದೆ ವಿಜಯಲಕ್ಷ್ಮಿ (35), ರತ್ನಮ್ಮ (44), ಆನಂದಿ (45), ಕೋಕಿಲ (21) ಎಂಬುವರು ನೇಣಿಗೆ ಶರಣಾಗಿದ್ದರೆ. ಅನಾರೋಗ್ಯದಿಂದ ಬೇಸತ್ತು ಶ್ರೀರಾಂಪುರ ನಿವಾಸಿ ಮಾಣಿಕ್ಯ (75) ಎಂಬುವನು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ನಗರದ ಹೊರವಲಯದ ಪರಪ್ಪನ ಅಗ್ರಹಾರ ಠಾಣಾ ವ್ಯಾಪ್ತಿಯ ಶಾಂತಿಪುರದಲ್ಲಿ ಹೊಟ್ಟೆ ನೋವು ತಾಳಲಾರದೆ 9ನೇ ತರಗತಿಯ ವಿದ್ಯಾರ್ಥಿನಿ 15 ವರ್ಷದ ಬಾಲಕಿ ರೇವತಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ.
ಪತ್ನಿ ಕಿರುಕುಳದಿಂದ ಬೇಸತ್ತು ಕಾಲಾಸಿಪಾಳ್ಯದ ನಿವಾಸಿ ಸಂಪಂಗಿ (30) ಮನೆಯಲ್ಲೇ ನೇಣಿಗೆ ಶರಣಾದರೆ, ತನ್ನ ತಂಗಿ ತಾನು ಪ್ರೀತಿಸಿದ ಹುಡುಗನ ಜೊತೆ ಮದುವೆಯಾಗಿದ್ದರಿಂದ ಮನನೊಂದು ಶಿವಾಜಿನಗರದ ನಿವಾಸಿ 27 ವರ್ಷದ ರಾಜು ಎಂಬುವರು ನೇಣಿಗೆ ಶರಣಾಗಿದ್ದಾನೆ.
ಪತಿ ಕಿರುಕುಳದಿಂದ ಬೇಸತ್ತು ಬೈಯಪ್ಪನಹಳ್ಳಿಯ ನಿವಾಸಿ ಸುನಂದಾ 27 ಎಂಬುವರು ಮನೆಯಲ್ಲೇ ಆತ್ಮಹತ್ಯೆಗೆ ಶರಣಾಗಿದ್ದಾರೆ. ಅನಾರೋಗ್ಯದ ಹಿನ್ನೆಲೆಯಲ್ಲಿ ಕೆ.ಆರ್.ಪುರಂನಲ್ಲಿ ರೇಷ್ಮಾ 15 ವರ್ಷದ ಬಾಲಕಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.