ದೇಶಕ್ಕಾಗಿ ಕಠಿಣ ನಿರ್ಣಯ ಕೈಗೊಳ್ಳುತ್ತೇನೆ: ಮೋದಿ
ದೇಶದ ಅಭಿವೃದ್ಧಿಗಾಗಿ ಕಠಿಣ ನಿರ್ಣಯ ಕೈಗೊಳ್ಳುವ ಅವಶ್ಯಕತೆ ಇದೆ ಎಂದು ಪ್ರಧಾನಿ...
ಪಣಜಿ: ದೇಶದ ಅಭಿವೃದ್ಧಿಗಾಗಿ ಕಠಿಣ ನಿರ್ಣಯ ಕೈಗೊಳ್ಳುವ ಅವಶ್ಯಕತೆ ಇದೆ ಎಂದು ಪ್ರಧಾನಿ ನರೇಂದ್ರ ಮೋದಿ ಶನಿವಾರ ಹೇಳಿದ್ದಾರೆ.
ಇಂದು ಗೋವಾದ ಪಣಜಿಯಲ್ಲಿ ಬಿಜೆಪಿ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಮೋದಿ, ಭ್ರಷ್ಟಾಚಾರದ ವಿರುದ್ಧ ಬಿಜೆಪಿ ನಿರಂತರ ಹೋರಾಟ ನಡೆಸಲಿದ್ದು, ಇದಕ್ಕಾಗಿ ಕಠಿಣ ನಿರ್ಣಯ ತೆಗೆದುಕೊಳ್ಳಲಿದೆ ಎಂದು ಅವರು ತಿಳಿಸಿದ್ದಾರೆ.
ದೇಶದ ಜನತೆ ಬಿಜೆಪಿಗೆ ಬಹುಮತ ನೀಡಿದ್ದರಿಂದ ಜಾತಿ, ಕುಟುಂಬ ರಾಜಕಾರಣ ಸೋಲನ್ನನುಭವಿಸಿತು. ಜನತೆ ರಾಜಕೀಯ ಪಕ್ಷಗಳಿಗೆ ಸ್ಪಷ್ಟ ಸಂದೇಶ ನೀಡಿದ್ದಾರೆ.
ಹಾಗಾಗಿ ಜನತೆಯ ಭರವಸೆಗಳನ್ನು ನಾವು ಈಡೇರಿಸಬೇಕಾಗಿದೆ ಎಂದು ಬಿಜೆಪಿ ಕಾರ್ಯಕರ್ತರಿಗೆ ಮೋದಿ ಸಲಹೆ ನೀಡಿದ್ದಾರೆ.
ಜನತೆಯೊಂದಿಗೆ ನಾವು ನಿರಂತರ ಸಂಪರ್ಕದಲ್ಲಿರಬೇಕು. ಹಾಗಾದರೆ ಮಾತ್ರ ಅವರ ಸಮಸ್ಯೆ ಅರಿತು ಬಗೆಹರಿಸಲು ಸಾಧ್ಯ ಎಂದ ಮೋದಿ, ನನ್ನ ನಿರ್ಣಯಗಳನ್ನು ಜನತೆ ಸ್ವೀಕರಿಸುತ್ತಾರೆ ಎಂಬ ವಿಶ್ವಾಸವಿದೆ ಎಂದು ಹೇಳಿದ್ದಾರೆ.
ದೇಶದ ಆರ್ಥಿಕ ಸಮಸ್ಯೆಯನ್ನು ಸುಧಾರಿಸಬೇಕಾಗಿದೆ. ಆರ್ಥಿಕ ಸಮಸ್ಯೆಯಿಂದ ದೇಶವನ್ನು ಹೊರತರಬೇಕು, ಇದಕ್ಕಾಗಿ ಅಗತ್ಯ ಕ್ರಮ ಕೈಗೊಳ್ಳಲು ಬಿಜೆಪಿ ಸರ್ಕಾರ ಮುಂದಾಗಿದೆ ಎಂದು ತಿಳಿಸಿದ್ದಾರೆ.