ಪ್ರೀತಿ ಜಿಂಟಾಗೆ ಲೈಂಗಿಕ ಕಿರುಕುಳ: ವಾಡಿಯಾ ವಿರುದ್ಧ ಎಫ್‌ಐಆರ್
ಬಾಲಿವುಡ್ ನಟಿ ಪ್ರೀತಿ ಜಿಂಟಾ ಅವರು ತಮ್ಮ ಮಾಜಿ ಬಾಯ್‌ಫ್ರೆಂಡ್ ಹಾಗೂ ಪಂಜಾಬ್ ಕಿಂಗ್ಸ್ ಇಲೆವೆನ್ ತಂಡದ ಸಹ ಮಾಲೀಕ ನೆಸ್ ವಾಡಿಯಾ ವಿರುದ್ಧ...
ಮುಂಬೈ: ಬಾಲಿವುಡ್ ನಟಿ ಪ್ರೀತಿ ಜಿಂಟಾಗೆ ಲೈಂಗಿಕ ಕಿರುಕುಳ ನೀಡಿದ್ದ ಆರೋಪದ ಮೇಲೆ ಉದ್ಯಮಿ ಹಾಗೂ ಕಿಂಗ್ಸ್ ಇಲವೆನ್ ಪಂಜಾಬ್ ತಂಡದ ಸಹ ಮಾಲೀಕ ನೆಸ್ ವಾಡಿಯಾ ವಿರುದ್ಧ ಮುಂಬೈ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.
ವಾಡಿಯಾ ಅವರು ಐಪಿಎಲ್ ಪಂದ್ಯದ ವೇಳೆ ತಮಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ಪ್ರೀತಿ ಜಿಂಟಾ ಮುಂಬೈನ ಮರಿನ್ ಡ್ರೈವ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ದೂರಿನನ್ವಯ ಸೆಕ್ಷನ್ 354, 506, 509 ಅಡಿ ವಾಡಿಯಾ ವಿರುದ್ಧ ಎಫ್‌ಐಆರ್ ದಾಖಲಿಸಿದ್ದು, ಇದೀಗ ಹೊಸದಾಗಿ ಸೆಕ್ಷನ್ 504ಯನ್ನು ಪೊಲೀಸರು ಸೇರ್ಪಡೆ ಮಾಡಿದ್ದಾರೆ.
ಘಟನೆ ಕುರಿತು ಪ್ರೀತಿ ಮಾತು
ಪ್ರಕರಣ ಸಂಬಂಧ ಇಂದು ಹೊಸದಾಗಿ ಹೇಳಿಕೆ ಬಿಡುಗಡೆ ಮಾಡಿರುವ ಪ್ರೀತಿ ಜಿಂಟಾ, ಯಾವ ಮಹಿಳೆಯು ವಿವಾಡಕ್ಕೀಡಾಗಲು ಇಚ್ಚಿಸುವುದಿಲ್ಲ. ನನಗೆ ಅನ್ಯಾಯವಾಗಿರುವುದರಿಂದ ಸಮಾಜದ ಮುಂದಿಟ್ಟಿದ್ದೇನೆ. ಇದು ನನಗೆ ಕಷ್ಟದ ದಿನವಾಗಿದ್ದು, ಇದನ್ನು ಸಮರ್ಥಕವಾಗಿ ಎದುರಿಸುತ್ತೇನೆ. ಇಲ್ಲಿ ಯಾರನ್ನು ನೋಯಿಸುವ ಉದ್ದೇಶ ನನಗಿಲ್ಲ ಎಂದು ತಿಳಿಸಿದ್ದಾರೆ.
ಪ್ರಕರಣದ ಕುರಿತು ಸಾಕ್ಷಿಗಳು ಸತ್ಯ ಹೇಳುವ ನಂಬಿಕೆಯಿದೆ ಇದ್ದು, ಪ್ರಕರಣದಲ್ಲಿ ನನಗೆ ನ್ಯಾಯ ಸಿಗುವ ವಿಶ್ವಾಸವಿದೆ. ಅಲ್ಲದೆ ಪ್ರಕರಣವನ್ನು ಮುಂಬೈ ಪೊಲೀಸರು ಸೂಕ್ತ ರೀತಿಯಲ್ಲಿ ತನಿಖೆ ಮಾಡುತ್ತಾರೆ ಎಂಬ ಭರವಸೆ ನನಗಿದೆ ಎಂದರು. ಇದೇ ವೇಳೆ ಮಾಧ್ಯಮದವರು ನನ್ನ ಖಾಸಗಿ ಜೀವನವನ್ನು ಗೌರವಿಸಬೇಕು ಎಂದು ಮನವಿ ಮಾಡಿದ್ದಾರೆ
ಐಪಿಎಲ್, ಬಿಸಿಸಿಐ ಅಧಿಕಾರಿಗಳ ವಿಚಾರಣೆ
ನಟಿ ಪ್ರೀತಿ ಜಿಂಟಾ ಐಪಿಎಲ್ ಪಂದ್ಯಾವಳಿ ವೇಳೆ ತಮ್ಮ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ ಎಂದು ಆರೋಪಿಸಿರುವುದರಿಂದ ಮುಂಬೈ ಪೊಲೀಸರು ಐಪಿಎಲ್ ಹಾಗೂ ಬಿಸಿಸಿಐ ಅಧಿಕಾರಿಗಳನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಮುಂದೆ ಪಂಜಾಬ್ ತಂಡದ ಆಟಗಾರರನ್ನು ಸಹ ವಿಚಾರಣೆಗೊಳಪಡಿಸುವ ಸಾಧ್ಯತೆಗಳಿವೆ.
ಘಟನೆ ವಿವರ
ಮೇ 30ರಂದು ಮುಂಬೈನ ವಾಂಖೆಡ್ ಸ್ಟೇಡಿಂನಲ್ಲಿ ಪಂಜಾಬ್ ಸೂಪರ್ ಕಿಂಗ್ಸ್ ಮತ್ತು ಕಿಂಗ್ಸ್ ಇಲೆವೆನ್ ತಂಡದ ನಡುವೆ ಪಂದ್ಯ ನಡೆಯುತ್ತಿದ್ದ ವೇಳೆ ರಾತ್ರಿ ಸುಮಾರು 8.30ರ ಸಮಯದಲ್ಲಿ ಈ ಘಟನೆ ನಡೆದಿದೆ ಎಂದು ಪ್ರೀತಿ ದೂರಿನಲ್ಲಿ ಆರೋಪಿಸಿದ್ದಾರೆ.
ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಶೀಘ್ರದಲ್ಲೇ ಪ್ರೀತಿ ಜಿಂಟಾ ಅವರ ಹೆಳಿಕೆಯನ್ನು ದಾಖಲಿಸಿಕೊಂಡು, ನೆಸ್ ವಾಡಿಯಾ ಅವರನ್ನು ವಿಚಾರಣೆಗೆ ಒಳಪಡಿಸುವ ಸಾಧ್ಯತೆ ಇದೆ.
44 ವರ್ಷದ ಉದ್ಯಮಿ ನೆಸ್ ವಾಡಿಯಾ ಹಾಗೂ 39 ವರ್ಷದ ನಟಿ ಪ್ರೀತಿ ಜಿಂಟಾ ಇಬ್ಬರು ಪಂಜಾಬ್ ತಂಡದ ಮಾಲೀಕರಾಗಿದ್ದು, ಹಲವು ವರ್ಷಗಳ ಕಾಲ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ ಇತ್ತೀಚಿಗೆ ಇಬ್ಬರೂ ದೂರವಾಗಿದ್ದರು.