ಕೆಐಎಡಿಬಿ ಭೂ ಹಗರಣ: ಸಿಐಡಿ ತನಿಖೆಗೆ 'ಲೋಕಾ'ದೇಶ
2006ರಿಂದ 2011ರ ಅವಧಿಯಲ್ಲಿ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ(ಕೆಐಎಡಿಬಿ)ಯಲ್ಲಿ ನಡೆದಿರುವ ಭೂ...
ಬೆಂಗಳೂರು: 2006ರಿಂದ 2011ರ ಅವಧಿಯಲ್ಲಿ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ(ಕೆಐಎಡಿಬಿ)ಯಲ್ಲಿ ನಡೆದಿರುವ ಭೂ ಹಗರಣದ ಕುರಿತು ತನಿಖೆ ನಡೆಸುವಂತೆ ಲೋಕಾಯುಕ್ತರು ಸಿಐಡಿಗೆ ಆದೇಶಿಸಿದ್ದಾರೆ. ಹಗರಣದಲ್ಲಿ ಆರ್ಥಿಕ ಅಪರಾಧ ನಡೆದಿರುವ ಸಾಧ್ಯತೆ ಇರುವುದರಿಂದ ಈ ನಿರ್ಧಾರಕ್ಕೆ ಬರಲಾಗಿದೆ ಎನ್ನಲಾಗುತ್ತಿದೆ.
ಆರ್ಥಿಕ ಅಪರಾಧ ಪ್ರಕರಣಗಳಲ್ಲಿ ಲೋಕಾಯುಕ್ತ ಕಾಯ್ದೆ 15(3) ಅಡಿ ಸಿಐಡಿಯಂತಹ ತನಿಖಾ ಸಂಸ್ಥೆಗಳ ಸಹಕಾರ ಪಡೆಯಲು ಅವಕಾಶ ಇದೆ. ಈ ನಿಮಯವನ್ನು ಆಧರಿಸಿ ಲೋಕಾಯುಕ್ತರು ಕೆಐಎಡಿಬಿ ಭೂ ಅಕ್ರಮ ಪ್ರಕರಣದ ತನಿಖೆಯನ್ನು ಸಿಐಡಿಗೆ ಒಪ್ಪಿಸಿದ್ದಾರೆ. ಅಲ್ಲದೆ ಜು.30ರೊಳಗೆ ಪ್ರಕರಣದ ತನಿಖಾ ವರದಿಯನ್ನು ಸಲ್ಲಿಸುವಂತೆ ಸೂಚಿಸಲಾಗಿದೆ.
ಹಿಂದಿನ ಜೆಡಿಎಸ್ ಹಾಗೂ ಬಿಜೆಪಿ ಸರ್ಕಾರಗಳಲ್ಲಿ ನಡೆದಿರುವ ಭೂ ಅಕ್ರಮದ ಬಗ್ಗೆ ತನಿಖೆ ಕೋರಿ ಲೋಕಾಯುಕ್ತಕ್ಕೆ ದೂರು ಸಲ್ಲಿಸಲಾಗಿತ್ತು. ಆದರೆ ಲೋಕಾಯುಕ್ತಕ್ಕೆ ಸಲ್ಲಿಕೆಯಾಗಿದ್ದ ದೂರನ್ನು ಇದೀಗ ಸಿಐಡಿಗೆ ವರ್ಗಾಯಿಸಿದ ಅಪರೂಪದ ಪ್ರಕರಣ ಇದಾಗಿದೆ. ಹಿಂದಿನ ಎರಡೂ ಸರ್ಕಾರಗಳ ಅವಧಿಯಲ್ಲಿನ ಅಕ್ರಮದ ಕುರಿತು ತನಿಖೆ ನಡೆಯುವ ಸಾಧ್ಯತೆ ಇದೆ.
ಈ ಸಂಬಂಧ ಭೂ ಹಗರಣದ ಕುರಿತು ಲೋಕಾಯುಕ್ತಕ್ಕೆ ಸಲ್ಲಿಕೆಯಾಗಿದ್ದ ದೂರು ಹಾಗೂ ಇತರೆ ದಾಖಲಾತಿಗಳನ್ನೊಳಗೊಂಡ ಪತ್ರವೊಂದು ಇತ್ತೀಚಿಗೆ ಸಿಐಡಿ ಎಡಿಜಿಪಿ ಕಚೇರಿಗೆ ರವಾನಿಸಲಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂದಿನ ಕ್ರಮ ಕೈಗೊಳ್ಳಬೇಕಿರುವುದರಿಂದ ಶೀಘ್ರ ತನಿಖೆ ನಡೆಸಿ ವರದಿ ನೀಡುವಂತೆ ಸಿಐಡಿಗೆ ಸೂಚಿಸಲಾಗಿದೆ.
ಜೆಡಿಎಸ್ ಹಾಗೂ ಬಿಜೆಪಿ ಸರ್ಕಾರದ ಅವಧಿಯಲ್ಲಿ ಕೈಗಾರಿಕಾ ಸಚಿವರಾಗಿದ್ದ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಹಾಗೂ ಬಿಜೆಪಿ ಸರ್ಕಾರದ ಅವಧಿಯಲ್ಲಿ ಕೈಗಾರಿಕಾ ಸಚಿವರಾಗಿದ್ದ ಮುರಗೇಶ್ ನಿರಾಣಿ ಅವರ ಅಧಿಕಾರವಧಿಯಲ್ಲಿ ಕೆಐಎಡಿಬಿಯಲ್ಲಿ ಭೂ ಅವ್ಯವಹಾರ ನಡೆದ ಆರೋಪಗಳು ಕೇಳಿಬಂದಿದ್ದವು. ಈ ಪ್ರಕರಣ ವಿಧಾಸಭೆಯ ಉಭಯ ಸದನಗಳಲ್ಲೂ ಪ್ರತಿಧ್ವನಿಸಿತ್ತು. ಅಲ್ಲದೆ ಸಿಎಜಿ ವರದಿಯಲ್ಲೂ ಭೂಸ್ವಾಧೀನ ಪರಿಹಾರ ನೀಡಿಕೆಯಲ್ಲೂ ಅವ್ಯವಹಾರ ನಡೆದಿರುವುದು ಬಹಿರಂಗವಾಗಿತ್ತು, ಹೀಗಾಗಿ ಅಂದಿನ ಸರ್ಕಾರ ತನಿಖೆಯ ಭರವಸೆ ನೀಡಿತ್ತು.
ಬೆಂಗಳೂರು ಸೇರಿದಂತೆ ರಾಜ್ಯದ ಇತರೆ ಜಿಲ್ಲೆಗಳಲ್ಲಿ ಕೆಐಎಡಿಬಿ ಕೈಗೊಂಡಿದ್ದ ಭೂ ಸ್ವಾಧೀನ, ಭೂಮಾಲೀಕರಿಗೆ ಪರಿಹಾರ, ಡಿನೋಟಿಫೈ ,ಉದ್ದಿಮೆಗಳಿಗೆ ಭೂಮಿ ಹಂಚಿಕೆಯಲ್ಲಿ ಭಾರಿ ಅವ್ಯವಹಾರ ನಡೆದಿದ್ದು, ಇದರಲ್ಲಿ ಪ್ರಭಾವಿ ರಾಜಕಾರಣಿಗಳು ಹಾಗೂ ಅಧಿಕಾರಿಗಳು ಭಾಗಿಯಾಗಿದ್ದು, ಇದರಿಂದ ಸರಕಾರದ ಬೊಕ್ಕಸಕ್ಕೆ ನಷ್ಟ ಆಗಿದೆ. ಹೀಗಾಗಿ ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ಆರ್ಟಿಐ ಕಾರ್ಯಕರ್ತ ಜಯಕುಮಾರ್ ಹಿರೇಮಠ್ ಹೈಕೋರ್ಟ್ನಲ್ಲಿ ಪ್ರಕರಣ ದಾಖಲಿಸಿದ್ದರು. ಪ್ರಕರಣದ ವಿಚಾರಣೆ ವೇಳೆ 2010-11ನೇ ಸಾಲಿನ ಸಿಎಜಿ ವರದಿಯನ್ನು ಆಧಾರವಾಗಿಟ್ಟುಕೊಂಡು ವಾದ ಮಾಡಿದ್ದನ್ನು ಮಾನ್ಯ ಮಾಡಿದ ಹೈಕೋರ್ಟ್ ಕೆಳ ಹಂತದ ನ್ಯಾಯಾಲಯದಲ್ಲಿ ದೂರು ದಾಖಲಿಸಿಸುವಂತೆ ಸೂಚಿಸಿತ್ತು. ಅದರನ್ವಯ ಲೋಕಾಯುಕ್ತಕ್ಕೆ ದೂರು ದಾಖಲಿಸಿ ಅವ್ಯವಹಾರಕ್ಕೆ ಕಾರಣರಾದವರ ಮೇಲೆ ಕ್ರಮ ಜರುಗಿಸುವಂತೆ ದೂರು ದಾಖಲಿಸಿದ ನಂತರ ತನಿಖೆಗೆ ಭರವಸೆ ದೊರೆತಿತ್ತು.
ರಾಜ್ಯದಲ್ಲಿ ಕೈಗಾರಿಕೆ ಬೆಳವಣಿಗೆಗಾಗಿ ದೊಡ್ಡ ಪ್ರಮಾಣದ ಭೂಸ್ವಾಧೀನ ಮಾಡಿಕೊಳ್ಳಲು ತೀರ್ಮಾನ ಕೈಗೊಳ್ಳಲಾಗಿತ್ತು. ಜೆಡಿಎಸ್-ಬಿಜೆಪಿ ಪಕ್ಷಗಳ ಸಮ್ಮಿಶ್ರ ಸರಕಾರದ ಅವಧಿಯಲ್ಲಿ ಬೆಂಗಳೂರು, ಮೈಸೂರು ಸಹಿತ ರಾಜ್ಯದ ಹಲವು ಜಿಲ್ಲೆಗಳಲ್ಲಿ 26,674 ಎಕರೆ ಪ್ರದೇಶಕ್ಕೆ ಸಂಬಂಧಿಸಿ ಭೂಸ್ವಾಧೀನ ಪ್ರಕ್ರಿಯೆ ವೇಳೆ ಅಂದಾಜು 6,687 ಕೋಟಿ ರೂ. ಅವ್ಯವಹಾರ ಆಗಿದೆ. ಇದರಲ್ಲಿ ಹಲವು ಜನಪ್ರತಿನಿಧಿಗಳು, ಹಿರಿಯ ಅಧಿಕಾರಿಗಳು ಭಾಗಿಯಾಗಿರುವುದು ತನಿಖೆ ನಡೆಸುವಂತೆ ದೂರಿನಲ್ಲಿ ಉಲ್ಲೇಖಿಸಲಾಗಿದೆ.