ಭಾರತ ಸಮೃದ್ಧಿಯಾಗಿದ್ದರೆ ನೆರೆ ರಾಷ್ಟ್ರಗಳಿಗೆ ಲಾಭ: ಮೋದಿ
ಎರಡು ದಿನಗಳ ಭೂತಾನ್ ಪ್ರವಾಸದಲ್ಲಿರುವ ಭಾರತ ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ಭೂತಾನ್ ಸಂಸತ್ ಉದ್ದೇಶಿಸಿ ಭಾಷಣ ಮಾಡಿದ್ದು...
ಥಿಂಪು: ಎರಡು ದಿನಗಳ ಭೂತಾನ್ ಪ್ರವಾಸದಲ್ಲಿರುವ ಭಾರತ ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ಭೂತಾನ್ ಸಂಸತ್ ಉದ್ದೇಶಿಸಿ ಭಾಷಣ ಮಾಡಿದ್ದು, ಭಾರತ ಸಮೃದ್ಧಿಯಾಗಿದ್ದರೆ ನೆರೆ ರಾಷ್ಟ್ರಗಳಿಗೂ ಸಾಕಷ್ಟು ಲಾಭವಾಗಲಿದೆ ಎಂದರು.
ಇಂದು ಭೂತಾನ್ ಸಂಸತ್ತಿನಲ್ಲಿ ಜಂಟಿ ಅಧಿವೇಶನವನ್ನುದ್ದೇಶಿಸಿ ಮಾತನಾಡಿದ ಮೋದಿ, ಭಾರತದ ಪ್ರಜಾಪ್ರಭುತ್ವವನ್ನು ಬೆಂಬಲಿಸಿದ್ದಕ್ಕೆ ಭೂತಾನ್ ಜನತೆಗೆ ಕೃತಜ್ಞತೆ ಸಲ್ಲಿಸಿದರು. ನೆರೆಯ ರಾಷ್ಟ್ರಗಳೊಂದಿಗೆ ಉತ್ತಮ ಬಾಂಧವ್ಯ ವೃದ್ಧಿಗೆ ಭಾರತ ಬದ್ಧವಾಗಿದೆ ಎಂದರು.
ಉತ್ತಮ ಪ್ರಜಾಪ್ರಭುತ್ವಕ್ಕೆ ಭಾರತ ಉದಾಹರಣೆಯಾಗಿದೆ. ಪ್ರಜಾಪ್ರಭುತ್ವದ ಶಕ್ತಿಯಿಂದ ಭಾರತ ಇಂತ ಅಭಿವೃದ್ಧಿ ಸಾಧಿಸಲು ಸಾಧ್ಯವಾಯಿತು. ಹೀಗಾಗಿ ಪ್ರಜಾಪ್ರಭುತ್ವವನ್ನು ಬೆಂಬಲಿಸಿದ ಭೂತಾನ್ ಸಹ ಭವಿಷ್ಯದಲ್ಲಿ ಉತ್ತಮ ಅಭಿವೃದ್ಧಿ ಸಾಧಿಸಲಿದೆ. ಹಾಗೆ ಭೂತಾನ್ ರಾಷ್ಟ್ರದ ರಾಜಕೀಯ ಪರಿಕಲ್ಪನೆಯು ಉತ್ತಮವಾಗಿದೆ ಎಂದರು.
ಪ್ರಧಾನಿಯಾದ ಬಳಿಕ ಇದೇ ಮೊದಲ ಭಾರಿಗೆ ವಿದೇಶಿ ಪ್ರವಾಸ ಕೈಗೊಂಡಿರುವ ನರೇಂದ್ರ ಮೋದಿ ಅವರು, ನೆರೆ ರಾಷ್ಟ್ರ ಭೂತಾನ್‌ನೊಂದಿಗೆ ಉತ್ತಮ ಬಾಂಧವ್ಯ ವೃದ್ಧಿಸುವ ಸಲುವಾಗಿ ನಿನ್ನೆ ಭೂತಾನ್‌ಗೆ ತೆರಳಿದ್ದರು. ಭಾರತದ ನೆರವಿನಿಂದ ನಿರ್ಮಾಣವಾಗಿರುವ ಭೂತಾನ್ ಸುಪ್ರೀಂಕೋರ್ಟ್ ಕಟ್ಟಡ ಹಾಗೂ ಸಂಸತ್ ಭವನ ಕಟ್ಟಡವನ್ನು ಮೋದಿ ನಿನ್ನೆ ಲೋಕಾರ್ಪಣೆ ಮಾಡಿದ್ದರು.
ಭಾರತ-ಭೂತಾನ್ ಅಭಿವೃದ್ಧಿ ಬಗ್ಗೆ ಮಹತ್ವಪೂರ್ಣ ಚರ್ಚೆ: ಸುಷ್ಮಾ
ಎರಡು ದಿನಗಳ ಭೂತಾನ್ ಪ್ರವಾಸದಲ್ಲಿರುವ ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾಸ್ವರಾಜ್, ಉಭಯ ರಾಷ್ಟ್ರಗಳ ಅಭಿವೃದ್ಧಿ ಕುರಿತಂತೆ ಭೂತಾನ್‌ನೊಂದಿಗೆ ಮಹತ್ವಪೂರ್ಣ ಚರ್ಚೆ ನಡೆಸಲಾಗಿದೆ ಎಂದರು.
ಭೂತಾನ್‌ನ ಥಿಂಪುವಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಭೂತಾನ್ ಪ್ರವಾಸ ಯಶಸ್ವಿಯಾಗಿದೆ. ಈ ಭೇಟಿಯಲ್ಲಿ ಹಲವು ಪ್ರಮುಖ ವಿಷಯಗಳನ್ನು ಕುರಿತು ಚರ್ಚಿಸಲಾಗಿದೆ ಎಂದರು. ಇದೇ ವೇಳೆ, ಭೂತಾನ್ ದೇಶದ ಉಪಚಾರದಿಂದ ನಾವು ಸಂತೃಪ್ತರಾಗಿದ್ದು, ಈ ಭೇಟಿ ಉಭಯ ದೇಶಗಳ ಬಾಂಧವ್ಯ ವೃದ್ಧಿಗೆ ಇದು ಪೂರಕವಾಗಿದೆ ಎಂದರು.