ಅತ್ಯಾಚಾರ ಪ್ರಕರಣದ ಬಗ್ಗೆ ಸಮಾಜವಾದಿ ಸಂಸದ ವಿವಾದಾತ್ಮಕ ಹೇಳಿಕೆ
ಉತ್ತರಪ್ರದೇಶದಲ್ಲಿ ಹೆಚ್ಚುತ್ತಿರುವ ಮಹಿಳಾ ದೌರ್ಜನ್ಯದ ಬಗ್ಗೆ ಎಲ್ಲೆಡೆ ಚರ್ಚೆಗಳಾಗುತ್ತಿವೆ. ಈಗಾಗಲೇ ...
ನವದೆಹಲಿ: ಉತ್ತರಪ್ರದೇಶದಲ್ಲಿ ಹೆಚ್ಚುತ್ತಿರುವ ಮಹಿಳಾ ದೌರ್ಜನ್ಯದ ಬಗ್ಗೆ ಎಲ್ಲೆಡೆ ಚರ್ಚೆಗಳಾಗುತ್ತಿವೆ. ಈಗಾಗಲೇ ಒಂದರ ಹಿಂದೆ ಇನ್ನೊಂದು ಎಂಬಂತೆ ಮಹಿಳಾ ದೌರ್ಜನ್ಯದ ಬಗ್ಗೆ 5 ಪ್ರಕರಣಗಳು ವರದಿಯಾಗಿದ್ದು ಇದು ದೇಶದಲ್ಲೇ ತಲ್ಲಣವನ್ನು ಸೃಷ್ಟಿಸಿತ್ತು. ಆದರೆ ಇದೀಗ ಸಮಾಜವಾದಿ ಪಕ್ಷದ ಸಂಸದ ನರೇಶ್ ಅಗ್ರವಾಲ್ ಈ ಬಗ್ಗೆ ಹೇಳಿಕೆಯೊಂದನ್ನು ನೀಡಿ ವಿವಾದಕ್ಕೀಡಾಗಿದ್ದಾರೆ.
ಬದೌನ್‌ನಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದ ಬಗ್ಗೆ ಸುದ್ದಿ ವಾಹಿನಿಯೊಂದಗಲ್ಲಿ ಮಾತನಾಡಿದ ಅಗ್ರವಾಲ್ "ಈಗ ಒಬ್ಬ ವ್ಯಕ್ತಿ ಇನ್ನೊಬ್ಬ ವ್ಯಕ್ತಿಯಿಂದ ಸಾಕುಪ್ರಾಣಿಯನ್ನು ಕೂಡಾ ಬಲವಂತವಾಗಿ ಕಸಿದುಕೊಂಡು ಹೋಗಲಾರ. ಹಾಗೇನಾದರೂ ಆತ ಯತ್ನಿಸಿದರೆ, ಸಾಕುಪ್ರಾಣಿ ಕೂಡಾ ಇನ್ನೊಬ್ಬನ ಜತೆ ಹೋಗಲು ನಿರಾಕರಿಸುತ್ತದೆ" ಎಂದು ಹೇಳುವ ಮೂಲಕ ವಿವಾದಕ್ಕೀಡಾಗಿದ್ದಾರೆ.
ಆದಾಗ್ಯೂ, ತಾನು ಆರೋಪಗಳ ಬಗ್ಗೆ ಏನೂ ಹೇಳಿಲ್ಲ ಎಂದು ಅಗ್ರವಾಲ್ ಸ್ಪಷ್ಟನೆ ನೀಡಿದ್ದಾರೆ. ಆರೋಪಗಳ ಬಗ್ಗೆ ತನಿಖೆ ನಡೆಯಲಿದೆ. ಆರೋಪ ಸಾಬೀತಾದರೆ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದ್ದಾರೆ.
ಅದೇ ವೇಳೆ ಜನರು ಉತ್ತರ ಪ್ರದೇಶದಲ್ಲಿ ನಡೆದ ಘಟನೆಗಳ ಬಗ್ಗೆ ಮಾತ್ರ ತಲೆಕೆಡಿಸಿಕೊಂಡಂತಿದೆ, ಇನ್ನುಳಿದ ಪ್ರದೇಶಗಳಲ್ಲಿ ನಡೆಯುವ ದೌರ್ಜನ್ಯದ ಬಗ್ಗೆ ಯಾರು ಗಮನ ಹರಿಸುವುದೇ ಇಲ್ಲ ಎಂದು ಅಗ್ರವಾಲ್ ಹೇಳಿದ್ದಾರೆ.
ಅಗ್ರವಾಲ್ ಅವರ ಹೇಳಿಕೆ ಇದೀಗ ವಿವಾದ ಸೃಷ್ಟಿಸಿದ್ದು, ಅಗ್ರವಾಲ್ ಮಹಿಳೆಯನ್ನು ಪ್ರಾಣಿಗೆ ಹೋಲಿಸಿರುವುದು ಖಂಡನಾರ್ಹ ಎಂದು ವುಮೆನ್ ಪವರ್ ಕನೆಕ್ಟ್ (ಡಬ್ಯ್ಲೂಪಿಸಿ) ಸಂಸ್ಥೆಯ ಅಧ್ಯಕ್ಷೆ ರಂಜನಾ ಕುಮಾರಿ ಹೇಳಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಕಾಂಗ್ರೆಸ್ ನೇತಾರೆ ಶೋಭಾ ಓಜಾ ಅಗ್ರವಾಲ್‌ರ ಹೇಳಿಕೆ ಅವರ ಮೃಗೀಯ ಮನಸ್ಥಿತಿಯನ್ನು ಬಿಂಬಿಸುತ್ತಿದೆ ಎಂದು ಹೇಳಿದ್ದಾರೆ.