ಅಪರಾಧ ತಡೆಗೆ ಜನರ ಸಹಕಾರ ಅಗತ್ಯ
ಕನ್ನಡಪ್ರಭ ವಾರ್ತೆ < ಹಾಸನ < ಜೂ 17
ಮಹಿಳಾ ದೌರ್ಜನ್ಯ, ಬಾಲ್ಯವಿವಾಹ, ಮಕ್ಕಳು ಮತ್ತು ಮಹಿಳೆಯರ ಸಾಗಾಟ, ನಾಪತ್ತೆ ಪ್ರಕರಣ ಸೇರಿದಂತೆ ಇತರೆ ಅಪರಾಧ ಪ್ರಕರಣಗಳು ಜಿಲ್ಲೆಯಲ್ಲಿ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಇವುಗಳ ವಿರುದ್ಧ ಕ್ರಮಕೈಗೊಳ್ಳಲು ಅಧಿಕಾರಿಗಳು, ಸಂಘಸಂಸ್ಥೆಗಳ ಸಹಕಾರ ಅಗತ್ಯ ಎಂದು ಜಿಲ್ಲಾಧಿಕಾರಿ ವಿ.ಅನ್ಬುಕುಮಾರ್ ಹೇಳಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಮಂಗಳವಾರ ನಾನಾ ಇಲಾಖೆಯ ಅಧಿಕಾರಿಗಳು, ಸಂಘಸಂಸ್ಥೆಗಳು, ಸಾರ್ವಜನಿಕರೊಂದಿಗೆ ಸಭೆಯನ್ನು ನಡೆಸಿ ಮಾತನಾಡಿದ ಜಿಲ್ಲಾಧಿಕಾರಿ, ಬಾಲ್ಯ ವಿವಾಹ , ವರದಕ್ಷಿಣೆ, ಬಾಲ ಕಾರ್ಮಿಕ ಪದ್ಧತಿ, ಮುಂತಾದವುಗಳನ್ನು ತಡೆಗಟ್ಟಲು ಸರ್ಕಾರ ಹಲವಾರು ಸಮಿತಿ ರಚಿಸಿದೆ. ಆದರೂ ಪರಿಣಾಮಕಾರಿಯಾಗಿ ಕೆಲಸ ಮಾಡಲು ಏಕೆ ಸಾಧ್ಯವಾಗುತ್ತಿಲ್ಲ ಎಂಬುದನ್ನು ಅರಿಯಲು ಬಿಚ್ಚು ಮನಸ್ಸಿನಿಂದ ಚರ್ಚೆಯಾಗಬೇಕು ಎಂದರು.
ಎಲ್ಲರ ಜವಾಬ್ದಾರಿ: ಅಪರಾಧಗಳನ್ನು ತಡೆಗಟ್ಟುವುದು ಎಲ್ಲರ ಜವಾಬ್ದಾರಿ. ಈ ನಿಟ್ಟಿನಲ್ಲಿ ಜನತೆಗೆ ಹೆಚ್ಚಿನ ಅರಿವು ಮೂಡಿಸಬೇಕು. ಶಾಲೆಯಿಂದ ಹೊರಗುಳಿದ ಮಕ್ಕಳ ಬಗ್ಗೆ ನಿಗಾವಹಿಸಿ ಶಾಲೆಗೆ ಪುನಃ ಸೇರಿಸಲಾಗಿದೆಯೇ, ಶಾಲೆಯಿಂದ ಹೊರಗುಳಿಯಲು ಕಾರಣ, ಮುಂತಾದ ವಿಷಯಗಳನ್ನು ಒಳಗೊಂಡಂತೆ ಪ್ರತಿಯೊಂದು ಮಗುವಿನ ಸ್ಪಷ್ಟ ಮಾಹಿತಿಯನ್ನು ದಾಖಲಿಸುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
ಅರಿವು ಮೂಡಿಸಿ: ಈ ಪ್ರಕಣರಗಳ ಬಗ್ಗೆ ದೂರು ನೀಡಿದರೆ ಅದನ್ನು ಎಫ್ಐಆರ್ ಮಾಡಲಾಗುತ್ತದೆ. ಆದ್ದರಿಂದ ಜಿಲ್ಲೆಯಲ್ಲಿ ಹೆಚ್ಚಾಗುತ್ತಿರುವ ಅತ್ಯಾಚಾರ, ನಾಪತ್ತೆ ಪ್ರಕರಣಗಳಿಗೆ ಕಾರಣಗಳೆನು ಎಂಬುದರ ಬಗ್ಗೆ ತಿಳಿಯಬೇಕಾಗಿದೆ. ಇದನ್ನು ತಡೆಗಟ್ಟುವಲ್ಲಿ ಎನ್ಜಿಓ ಸಂಸ್ಥೆಗಳ ಪಾತ್ರ ಬಹಳ ಮುಖ್ಯವಾಗಿದೆ. ಆದ್ದರಿಂದ ಈ ವಿರುದ್ಧ ಅರಿವು ಮೂಡಸಬೇಕಾಗಿದೆ. ಅದಕ್ಕಾಗಿ ಸ್ಥಳೀಯ ಗ್ರಾಮ ಲೆಕ್ಕಾಧಿಕಾರಿ, ಗ್ರಾಮಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳು, ಕೃಷಿ ಇಲಾಖೆ, ಸ್ಥಳೀಯ ಪೊಲೀಸರನ್ನು ಒಳಪಡಿಸಲಾಗುತ್ತದೆ ಎಂದರು.
ಬಾಲ್ಯ ವಿವಾಹ, ಬಾಲ ಕಾರ್ಮಿಕರು, ಮಹಿಳಾ ದೌರ್ಜನ್ಯ ಮುಂತಾದವುಗಳು ಕಂಡು ಬಂದಲ್ಲಿ ತಕ್ಷಣ ದೂರವಾಣಿ ತಿಳಿಸಲು ಸಾರ್ವಜನಿಕರಿಗೆ ನೆರವಾಗುವಂತೆ ಸಹಾಯವಾಣಿ ತೆರೆಯಲು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕರು ಕ್ರಮವಹಿಸುವಂತೆ ತಿಳಿಸಿದ ಅವರು, ಆಕಾಶವಾಣಿಯಲ್ಲಿ ಇಂತಹ ವಿಷಯಗಳ ಕುರಿತು ವಿಷಯ ಪರಿಣಿತರಿಂದ ಮಾತನಾಡಿಸಿ ಪ್ರಸಾರ ಮಾಡಿಸಲು ಸಹ ಕ್ರಮವಹಿಸುವಂತೆ ತಿಳಿಸಿದರು.
26ರಂದು ಕಾರ್ಯಾಗಾರ: ದೌರ್ಜನ್ಯ ಕುರಿತು ಅರಿವು ಮೂಡಿಸಬೇಕು ಎಂದ ಅವರು, ಅಧಿಕಾರಿಗಳು ಮತ್ತು ಸ್ವಯಂ ಸೇವಾ ಸಂಸ್ಥೆಗಳ ಅಧ್ಯಕ್ಷರು ಹಾಗೂ ಪದಾಧಿಕಾರಿಗಳಿಗೆ ಮಹಿಳಾ ದೌರ್ಜನ್ಯ ತಡೆಗಟ್ಟುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಲು ಜೂ. 26 ರಂದು ನಗರದ ಹಾಸನಾಂಬ ಕಲಾಭವನದಲ್ಲಿ ಕಾರ್ಯಾಗಾರ ಏರ್ಪಡಿಸಲಾಗುವುದು ಎಂದರು
ಕಾವಲು ಸಮಿತಿ: ಜಿಲ್ಲಾ ಸಮಗ್ರ ಮಕ್ಕಳ ರಕ್ಷಣಾಧಿಕಾರಿ ವಿ.ಗೀತಾ ಮಾತನಾಡಿ, ದೌರ್ಜನ್ಯ ಹಾಗೂ ಇತರೆ ಕಾರಣಗಳಿಂದ ಮಕ್ಕಳು ಮನೆಯನ್ನು ಬಿಟ್ಟು ನಾಪತ್ತೆಯಾಗುತ್ತಿದ್ದಾರೆ. ಇದರ ವಿರುದ್ಧ ನಾವು ಕಾವಲು ಸಮಿತಿ ರಚಿಸಿ ಹಳ್ಳಿಗಳಲ್ಲಿ ಅರಿವು ಮೂಡಿಸಲಾಗುತ್ತಿದೆ. ಆದರೂ ಸಹ ನಾಪತ್ತೆ ಹಾಗೂ ಇತರೆ ಪ್ರಕರಣಗಳು ಹೆಚ್ಚಾಗುತ್ತಿವೆ ಎಂದರು.
ಸಮಸ್ಯೆ ಆಲಿಸಿ: ವೈದ್ಯೆ ಭಾರತಿ ರಾಜಶೇಖರ್ ಮಾತನಾಡಿ, ನಾಪತ್ತೆ, ಅತ್ಯಾಚಾರ, ದೌರ್ಜನ್ಯದಂತಹ ಪ್ರಕರಣಗಳನ್ನು ತಡೆಗಟ್ಟಲು ಸಾರ್ವಜನಿಕರಲ್ಲಿ ಅರಿವನ್ನು ಮೂಡಿಸಬೇಕಾಗಿದೆ ಎಂದರು.
ಸಾಹಿತಿ ರೂಪ ಹಾಸನ್ ಮಾತನಾಡಿ, ಹಳ್ಳಿಗಳಲ್ಲಿ ಅಪರಾಧ ಪ್ರಕರಣಗಳ ಕುರಿತು ಅಂಗನವಾಡಿ ಸಹಾಯಕರು, ಸ್ತ್ರೀಶಕ್ತಿ ಸಂಘದವರು ಅರಿವು ಮೂಡಿಸಬೇಕು ಎಂದರು. ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಉಪೇಂದ್ರ ಪ್ರತಾಪ್ ಸಿಂಗ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ರಶ್ಮಿ, ಡಾ.ಸಾವಿತ್ರಿ, ಕೆ.ಟಿ.ಜಯಶ್ರೀ, ಅಮ್ಜದ್ ಖಾನ್, ಚರ್ಚೆಯಲ್ಲಿ ಪಾಲ್ಗೊಂಡು ಸಲಹೆ ನೀಡಿದರು. ಈ ಸಂದರ್ಭದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಚಿದಾನಂದ್, ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಬಸವರಾಜು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಶ್ಯಾಮಲಾದೇವಿ. ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಮತ್ತು ವಿವಿಧ ಸ್ವಯಂ ಸೇವಾ ಸಂಸ್ಥೆ ಪದಾಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.
ಪರಿಹಾರ ಚೆಕ್ ವಿತರಣೆ: ಸಭೆಯ ನಂತರ ಜಿಲ್ಲಾಧಿಕಾರಿ ವಿ.ಅನ್ಬುಕುಮಾರ್ ಅವರು, ದೇಶಕ್ಕಾಗಿ ಹೋರಾಡಿ ಮಡಿದ ಯೋಧ ಯೋಗಾನಂದ ಅವರ ಕುಟುಂಬಕ್ಕೆ ರಾಜ್ಯ ಸರ್ಕಾರದಿಂದ ಎರಡು ಲಕ್ಷ ರು.ಗಳ ಚೆಕ್ ಅನ್ನು ನೀಡಿದರು.