ನಿಯಮಾವಳಿ ಪ್ರಕಾರ ಪರಿಷತ್‌ಗೆ ನಾಮನಿರ್ದೇಶನ ಮಾಡಿ: ರಾಜ್ಯಪಾಲರಿಗೆ ಕೇಂದ್ರ ಸೂಚನೆ
ನಿಯಮಾವಳಿ ಪ್ರಕಾರ ವಿಧಾನ ಪರಿಷತ್‌ನ ಐದು ಸ್ಥಾನಗಳಿಗೆ ಹೊಸ ಸದಸ್ಯರನ್ನು ನಾಮನಿರ್ದೇಶನ ಮಾಡುವಂತೆ...
ಬೆಂಗಳೂರು: ನಿಯಮಾವಳಿ ಪ್ರಕಾರ ವಿಧಾನ ಪರಿಷತ್‌ನ ಐದು ಸ್ಥಾನಗಳಿಗೆ ಹೊಸ ಸದಸ್ಯರನ್ನು ನಾಮನಿರ್ದೇಶನ ಮಾಡುವಂತೆ ಕೇಂದ್ರ ಸರ್ಕಾರ ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಅವರಿಗೆ ಮಂಗಳವಾರ ಸೂಚಿಸಿದೆ
ರಾಜಕೀಯ ವ್ಯಕ್ತಿಗಳನ್ನು ವಿಧಾನ ಪರಿಷತ್‌ಗೆ ನಾಮನಿರ್ದೇಶನ ಮಾಡಲಾಗುತ್ತಿದೆ ಎಂದು ಆರೋಪಿಸಿ ರಾಜ್ಯ ಬಿಜೆಪಿ ಕೇಂದ್ರ ಗೃಹ ಸಚಿವಾಲಯಕ್ಕೆ ದೂರು ನೀಡಿತ್ತು. ಈ ಹಿನ್ನೆಲೆಯಲ್ಲಿ ರೂಲ್ಸ್ ಪಾಲಿಸುವಂತೆ ರಾಜ್ಯಪಾಲರಿಗೆ ಗೃಹ ಸಚಿವಾಲಯ ಸೂಚಿಸಿದೆ.
ವಿಧಾನ ಪರಿಷತ್‌ಗೆ ಐವರು ನಾಮನಿರ್ದೇಶಿತ ಸದಸ್ಯರ ಪಟ್ಟಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯಪಾಲ ಭಾರದ್ವಾಜ್ ಅವರಿಗೆ ರವಾನಿಸಿದ್ದು, ನಟಿ ಜಯಮಾಲಾ, ವಿ.ಎಸ್. ಉಗ್ರಪ್ಪ, ಇಕ್ಬಾಲ್ ಅಹ್ಮದ್, ಶಾಂತಕುಮಾರ್ ಹಾಗೂ ಅಬ್ದುಲ್ ಜಬ್ಬಾರ್ ಅವರ ಹೆಸರನ್ನು ಶಿಫಾರಸು ಮಾಡಿದ್ದಾರೆ.
ನಿಯಮಾವಳಿ ಪ್ರಕಾರ ಸಾಮಾಜಿಕ ಸೇವೆ, ಶಿಕ್ಷಣ, ಕಲೆ, ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಿರುವವರನ್ನು ಗುರುತಿಸಿ ಮೇಲ್ಮನೆಗೆ ನಾಮನಿರ್ದೇಶನ ಮಾಡಲಾಗುತ್ತದೆ. ಆದರೆ, ಜಯಮಾಲಾ ಹೊರತು ಪಡಿಸಿ ಉಳಿದವರು ಕಾಂಗ್ರೆಸ್ ಪಕ್ಷದ ನಾಯಕರಾಗಿದ್ದು, ಅವರನ್ನು ಯಾವ ಆಧಾರದ ಮೇಲೆ ಆಯ್ಕೆ ಮಾಡಲಾಗಿದೆ ಎಂದು ಬಿಜೆಪಿ ಪ್ರಶ್ನಿಸಿತ್ತು.