ರಾಜ್ಯಪಾಲರ ರಾಜಿನಾಮೆ ಪರ್ವ ಶುರು: ಉತ್ತರ ಪ್ರದೇಶ ರಾಜ್ಯಪಾಲ ರಾಜಿನಾಮೆ
ಯುಪಿಎ ಸರ್ಕಾರ ನಿಯೋಜಿತ ರಾಜ್ಯಪಾಲರ ರಾಜಿನಾಮೆ ಪರ್ವ ಶುರುವಾಗಿದೆ. ಈಗಾಗಲೇ...
ಉತ್ತರಪ್ರದೇಶ: ಯುಪಿಎ ಸರ್ಕಾರ ನಿಯೋಜಿತ ರಾಜ್ಯಪಾಲರ ರಾಜಿನಾಮೆ ಪರ್ವ ಶುರುವಾಗಿದೆ. ಈಗಾಗಲೇ ಉತ್ತರಪ್ರದೇಶದ ರಾಜ್ಯಪಾಲ ಬಿಎಲ್ ಜೋಷಿ ಅವರು ರಾಜಿನಾಮೆ ನೀಡಿರುವುದಾಗಿ ಸುದ್ದಿಮೂಲಗಳಿಂದ ತಿಳಿದುಬಂದಿದೆ.
ಮಂಗಳವಾರ ಜೋಷಿಯವರು ಕೇಂದ್ರ ಗೃಹಸಚಿವಾಲಯಕ್ಕೆ ರಾಜಿನಾಮೆ ಪತ್ರ ಸಲ್ಲಿಸಿದ್ದಾರೆ. ಗೃಹ ಸಚಿವಾಲಯದ ಕಾರ್ಯದರ್ಶಿ ಅನಿಲ್ ಗೋಸ್ವಾಮಿ ಅವರು ಏಳು ರಾಜ್ಯಪಾಲರಿಗೆ ಕರೆ ಮಾಡಿ ರಾಜಿನಾಮೆ ನೀಡುವಂತೆ ಹೇಳಿರುವುದಾಗಿ ಬಲ್ಲಮೂಲಗಳು ವರದಿ ಮಾಡಿವೆ.
ಮಂಗಳವಾರ ರಾಜಸ್ತಾನದ ಗವರ್ನರ್ ಮಾರ್ಗರೆಟ್ ಆಳ್ವ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕರೆ ಮಾಡಿದ್ದು, ಇದು ಕೂಡಾ ಹೆಚ್ಚಿನ ಊಹಾಪೋಹಗಳನ್ನು ಸೃಷ್ಟಿಮಾಡಿದೆ. ಆದರೆ ಅದು ಸೌಜನ್ಯ ಕರೆಯಾಗಿತ್ತು ಎಂದು ಪ್ರಧಾನಿ ಕಚೇರಿಯ ಮೂಲಗಳು ಹೇಳಿವೆ.
ಅದೇ ವೇಳೆ ಆಳ್ವ ಮತ್ತು ಇನ್ನಿಬ್ಬರು ರಾಜ್ಯಪಾಲರು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರನ್ನು ಭೇಟಿ ಮಾಡಿದ್ದಾರೆ ಎಂದು ಪ್ರಧಾನಿ ಕಚೇರಿ ಮೂಲಗಳು ಹೇಳಿವೆ.
ಬಿಎಲ್ ಜೋಷಿ ಅವರ ರಾಜಿನಾಮೆಯ ಬೆನ್ನಲ್ಲೇ ಕರ್ನಾಟಕದ ರಾಜ್ಯಪಾಲ ಹೆಚ್. ಆರ್. ಭಾರದ್ವಾಜ್ ಮತ್ತು ಅಸ್ಸಾಂ ರಾಜ್ಯಪಾಲ ಜೆಬಿ ಪಟ್ನಾಯಕ್ ಕೂಡಾ ರಾಜಿನಾಮೆ ನೀಡಿರುವುದಾಗಿ ಸುದ್ದಿ ಕೇಳಿ ಬರುತ್ತಿದೆ.
ಮಾತ್ರವಲ್ಲದೆ ಇನ್ನು ಕೆಲವು ರಾಜ್ಯಗಳ ರಾಜ್ಯಪಾಲರು ರಾಜಿನಾಮೆ ನೀಡುವ ಸಾಧ್ಯತೆಗಳಿವೆ ಎಂದು ಬಲ್ಲಮೂಲಗಳು ಹೇಳಿವೆ.
ರಾಜಿನಾಮೆ ನೀಡಿಲ್ಲ: ಭಾರದ್ವಾಜ್
ಭಾರದ್ವಾಜ್ ಮತ್ತು ಪಟ್ನಾಯಕ್ ಮಂಗಳವಾರ ಮಧ್ಯಾಹ್ನ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರನ್ನು ಭೇಟಿ ಮಾಡಿದ್ದರು. ಆದರೆ ತಾವು ರಾಜಿನಾಮೆ ನೀಡಿಲ್ಲ, ಜೂನ್ 29ರ ವರೆಗೆ ರಾಜ್ಯಪಾಲರಾಗಿ ಮುಂದುವರೆಯುವುದಾಗಿ ಹೇಳಿಕೆ ನೀಡಿದ್ದಾರೆ.