'ಪ್ರೀತಿ'ಗೆ ಕಿರುಕುಳ: ಭೂಗತ ಪಾತಕಿಗಳಿಂದ ವಾಡಿಯಾಗೆ ಬೆದರಿಕೆ
ಬಾಲಿವುಡ್ ನಟಿ ಪ್ರೀತಿ ಜಿಂಟಾ ಹಾಗೂ ಉದ್ಯಮಿ ನೆಸ್ ವಾಡಿಯಾ ಪ್ರಕರಣ ದಿನಕ್ಕೊಂದು..
ಮುಂಬೈ: ಬಾಲಿವುಡ್ ನಟಿ ಪ್ರೀತಿ ಜಿಂಟಾ ಹಾಗೂ ಉದ್ಯಮಿ ನೆಸ್ ವಾಡಿಯಾ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದ್ದು, ಇದೀಗ ವಾಡಿಯಾ ಗ್ರೂಪ್ಸ್ಗೆ ಭೂಗತ ಪಾತಕಿಗಳಿಂದ ಬೆದರಿಕೆ ಕರೆ ಬರುತ್ತಿವೆ ಎಂದು ಆರೋಪಿಸಿ ನೆಸ್ ವಾಡಿಯಾ ಅವರ ತಂದೆ ನುಸ್ಲಿ ವಾಡಿಯಾ ಅವರು ಬುಧವಾರ ಪೊಲೀಸರಿಗೆ ದೂರು ನೀಡಿದ್ದಾರೆ.
ಪ್ರೀತಿ ಜಿಂಟಾ ಅವರಿಗೆ ಕಿರುಕುಳ ನೀಡಿದರೆ ಅಪಾಯ ಗ್ಯಾರಂಟಿ ಎಂಬ ಎಚ್ಚರಿಕೆ ಕರೆಗಳು ಭೂಗತ ಪಾತಕಿಗಳಿಂದ ಬರುತ್ತಿವೆ ಎಂದು ಆರೋಪಿಸಿ ನುಸ್ಲಿ ವಾಡಿಯಾ ಅವರು ಇಂದು ಎನ್ಎಂ ಜೋಶಿ ಮಾರ್ಗ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರು ದಾಖಲಿಸಿಕೊಂಡಿರುವ ಮುಂಬೈ ಪೊಲೀಸರು ಪ್ರಕರಣವನ್ನು ವಸೂಲಿ ನಿಯಂತ್ರಣ ಘಟಕಕ್ಕೆ ವರ್ಗಾಯಿಸಿದ್ದಾರೆ.
ವರದಿಗಳ ಪ್ರಕಾರ, ಭೂಗತ ಪಾತಕಿ ರವಿ ಪೂಜಾರಿ ಗ್ಯಾಂಗ್ ತಮಗೆ ಬೆದರಿಕೆ ಹಾಕಿದೆ ಎಂದು ವಾಡಿಯಾ ಆರೋಪಿಸಿದ್ದಾರೆ.
ಮೇ 30ರಂದು ವಾಂಖೆಡೆ ಕ್ರೀಡಾಂಗಣದಲ್ಲಿ ಐಪಿಎಲ್ ಪಂದ್ಯ ನಡೆಯುತ್ತಿದ್ದ ವೇಳೆ ನೆಸ್ ವಾಡಿಯಾ ಜತೆ ಪ್ರೀತಿ ಜಗಳ ನಡೆದಿತ್ತು. ವಾಡಿಯಾ ತನ್ನನ್ನು ಕೀಳು ಮಟ್ಟದ ಭಾಷೆಯಲ್ಲಿ ಬೈದಿದ್ದು ಮಾತ್ರವಲ್ಲದೆ ತನಗೆ ಲೈಂಗಿಕ ಕಿರುಕುಳ ನೀಡಿದ್ದರು ಎಂದು ಪ್ರೀತಿ ಆರೋಪಿಸಿದ್ದರು. ಈ ಬಗ್ಗೆ ಮುಂಬೈ ಪೊಲೀಸರು ವಿಚಾರಣೆ ನಡೆಸುತ್ತಿದ್ದು, ಇನ್ನೊಮ್ಮೆ ಪ್ರೀತಿಯ ಹೇಳಿಕೆಯನ್ನು ದಾಖಲಿಸುವ ಸಾಧ್ಯತೆ ಇದೆ.