ಬೋರ್ವೆಲ್ಗೆ ಬಿದ್ದ ಬಾಲಕಿಯ ರಕ್ಷಣೆಗೆ ಬಂತು ರೋಬೋ
ಬಿಜಾಪುರ ಜಿಲ್ಲೆ ನಾಗಠಾಣ ಗ್ರಾಮದಲ್ಲಿ ನಿನ್ನೆ ಸಂಜೆ ತೆರೆದ ಕೊಳವೆ ಬಾವಿಗೆ ಬಿದ್ದಿರುವ ನಾಲ್ಕು ವರ್ಷದ ಬಾಲಕಿ ಅಕ್ಷತಾಳ ರಕ್ಷಣೆಗಾಗಿ ಈಗ ರೋಬೋಟ್ ಆಗಮಿಸಿದೆ.
ಬಿಜಾಪುರ: ಬಿಜಾಪುರ ಜಿಲ್ಲೆ ನಾಗಠಾಣ ಗ್ರಾಮದಲ್ಲಿ ನಿನ್ನೆ ಸಂಜೆ ತೆರೆದ ಕೊಳವೆ ಬಾವಿಗೆ ಬಿದ್ದಿರುವ ನಾಲ್ಕು ವರ್ಷದ ಬಾಲಕಿ ಅಕ್ಷತಾಳ ರಕ್ಷಣೆಗಾಗಿ ಈಗ ರೋಬೋಟ್ ಆಗಮಿಸಿದೆ.
ಕೊಳವೆ ಬಾವಿಗೆ ಬಿದ್ದ ಮಗು ಹೊರತೆಗೆಯುವ ರೋಬೋಟ್ನೊಂದಿಗೆ ರೋಬೋಟ್ ತಜ್ಞ ಮಣಿಕಂಠನ್ ಅವರು ಬೆಂಗಳೂರಿನಿಂದ ವಿಶೇಷ ಹೆಲಿಕಾಪ್ಟರ್ ಮೂಲಕ ಇಂದು ಮಧ್ಯಾಹ್ನ ಬಿಜಾಪುರಕ್ಕೆ ಬಂದಿದ್ದಾರೆ. ಮಣಿಕಂಠನ್ ಜತೆ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ್ ಸಹ ಆಗಮಿಸಿದ್ದಾರೆ.
ರೋಬೋಟ್ ಮೂಲಕ ಮಗು ಹೊರತೆಗೆಯುವ ಕಾರ್ಯ ನಡೆಯುತ್ತಿದ್ದು, ಮಣಿಕಂಠನ್ ಅವರ ಕಾರ್ಯಾಚರಣೆಗೆ ಅಗ್ನಿ ಶಾಮಕ ದಳದ ಸಿಬ್ಬಂದಿ ಸಾಥ್ ನೀಡಿದ್ದಾರೆ.
ಸ್ಥಳದಲ್ಲಿ ಮಳೆ ಬರುವ ವಾತಾವರಣ ನಿರ್ಮಾಣವಾಗಿದ್ದು, ಒಂದು ವೇಳೆ ಮಳೆ ಬಂದರೆ, ಕೊಳವೆ ಬಾವಿಗೆ ನೀರು ಹೋಗದಂತೆ ಟಾರ್ಪಲ್ಗಳನ್ನು ಹಾಕಲಾಗಿದೆ. ಮತ್ತೊಂದಡೆ ಪುಣಾದಿಂದ ಆಗಮಿಸಿರುವ ವಿಪತ್ತು ನಿರ್ವಹಣಾ ತಂಡ ಕ್ಯಾಮೆರಾವನ್ನು ಕೊಳವೆ ಬಾವಿಯೊಳಕ್ಕೆ ಬಿಟ್ಟು ಮಗು ಎಷ್ಟು ಆಳದಲ್ಲಿ ಸಿಲುಕಿದೆ ಎಂಬುದನ್ನು ಪತ್ತೆಹಚ್ಚಿದ್ದಾರೆ.
29 ಅಡಿ ಆಳದಲ್ಲಿ ಮಗು ಸಿಲುಕಿರುವ ಬಗ್ಗೆ ಮಾಹಿತಿ ಲಭ್ಯವಾಗಿದ್ದು, ಮಗುವಿನ ಚಲನವಲನಗಳ ಬಗ್ಗೆ ಹೆಚ್ಚಿನ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಮೀಟರ್ ಲೋಕೇಟಿಂಗ್ ಮೂಲಕ ಮಗುವಿರುವ ಸ್ಥಳವನ್ನು ಸಿಬ್ಬಂದಿಗಳು ಪತ್ತೆ ಹಚ್ಚಿದ್ದು, ರಕ್ಷಣಾ ಕಾರ್ಯಾಚರಣೆ ಬಗ್ಗೆ ಯೋಜನೆ ರೂಪಿಸುತ್ತಿದ್ದಾರೆ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಕವಿತಾ ಹೇಳಿದ್ದಾರೆ.
ತಂದೆ ಹಣಮಂತನ ಜೊತೆಗೆ ಹೋಗುತ್ತಿದ್ದಾಗ ಈ ದುರಂತ ಸಂಭವಿಸಿದೆ. ಮಗು ಜೋರಾಗಿ ಚೀರಿಕೊಂಡ ತಕ್ಷಣ ತಂದೆ ಹಿಂತಿರುಗಿ ನೋಡಿದ್ದಾರೆ. ಬೋರ್ವೆಲ್ ಬಳಿಗೆ ಹೋಗಿ ನೋಡುವಷ್ಟರಲ್ಲಿ ಪುತ್ರಿ 50 ಅಡಿ ಆಳಕ್ಕೆ ಬಿದ್ದುಬಿಟ್ಟಿದ್ದಳು. ಸುದ್ದಿ ತಿಳಿದ ತಕ್ಷಣ ಎಸ್ಪಿ ಮತ್ತು ಅಗ್ನಿಶಾಮಕ ದಳ ಸಿಬ್ಬಂದಿ ಮತ್ತು ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ಆರಂಭಿಸಿದ್ದಾರೆ.
ಕತ್ತಲು ಆವರಿಸಿದ್ದರೂ ಲೈಟ್ಗಳ ಸಹಾಯದಿಂದ ತಡ ರಾತ್ರಿಯೂ ರಕ್ಷಣಾ ಕಾರ್ಯ ಮುಂದುವರಿದಿತ್ತು. ಗುಲ್ಬರ್ಗ ಜಿಲ್ಲೆಯ ಜೇವರ್ಗಿ ತಾಲೂಕಿನ ಹಣಮಂತ ಕೆಲಸಕ್ಕಾಗಿ ಜಿಲ್ಲೆಗೆ ಬಂದಿದ್ದರು.