ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ತ್ಯಾಜ್ಯ ನಿರ್ವಹಣೆಯಲ್ಲಿ ನಗರಾಭಿವೃದ್ಧಿ ಇಲಾಖೆ ವಿಫಲವಾಗಿಲ್ಲ: ನಾಯ್ಡು

ಘನತ್ಯಾಜ್ಯ ನಿರ್ವಹಣೆ ಒಂದು ಸವಾಲಾಗಿದ್ದರೂ ನಗರಾಭಿವೃದ್ಧಿ ಇಲಾಖೆ ವಿಫಲವಾಗಿಲ್ಲ ಎಂದು ಕೇಂದ್ರ ನಗರಾಭಿವೃದ್ಧಿ...

Lingaraj Badiger
Updated On : 20 Jun 2014, 4:44 am

ಬೆಂಗಳೂರು: ಘನತ್ಯಾಜ್ಯ ನಿರ್ವಹಣೆ ಒಂದು ಸವಾಲಾಗಿದ್ದರೂ ನಗರಾಭಿವೃದ್ಧಿ ಇಲಾಖೆ ವಿಫಲವಾಗಿಲ್ಲ ಎಂದು ಕೇಂದ್ರ ನಗರಾಭಿವೃದ್ಧಿ ಸಚಿವ ಎಂ. ವೆಂಕಯ್ಯ ನಾಯ್ಡು ಅವರು ಶುಕ್ರವಾರ ಹೇಳಿದ್ದಾರೆ.

ಇಂದು ನಗರದಲ್ಲಿ ಮೆಟ್ರೋ ಕಾಮಗಾರಿ ಪರಿಶೀಲಿಸಿದ ನಂತರ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ನಾಯ್ಡು, ತ್ಯಾಜ್ಯ ನಿರ್ವಹಣೆ ಸ್ಥಳೀಯ ಆಡಳಿತಕ್ಕೆ ಮುಖ್ಯ ಸವಾಲಾಗಿ ಪರಿಣಮಿಸಿದೆ. ಆದರೆ ಸಮಸ್ಯೆ ಪರಿಹರಿಸುವಲ್ಲಿ ಇಲಾಖೆ ವಿಫಲವಾಗಿಲ್ಲ ಎಂದರು. ಅಲ್ಲದೆ ಶೀಘ್ರದಲ್ಲೇ ಕೇಂದ್ರ ಸಚಿವಾಲಯದ ಪ್ರಧಾನ ಕಾರ್ಯದರ್ಶಿಗಳು ನಗರಕ್ಕೆ ಭೇಟಿ ನೀಡಿ ಪಾಲಿಕೆಯ ಅಧಿಕಾರಿಗಳು ಹಾಗೂ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಲಿದ್ದಾರೆ ಎಂದು ತಿಳಿಸಿದರು.

ಪಾಲಿಕೆ ಅಧಿಕಾರಿಗಳು ಸಮಸ್ಯೆ ಹಾಗೂ ಪರಿಹಾರದ ಬಗ್ಗೆ ವಿವರಣೆ ನೀಡಿದ್ದಾರೆ. ದೀರ್ಘ ಹಾಗೂ ತಾತ್ಕಾಲಿಕವಾಗಿ ಪರಿಹಾರ ಕಂಡುಹಿಡಿಯುವ ಕುರಿತು ಚರ್ಚಿಸಲಾಗಿದೆ. ಯಾವ ರೀತಿಯಲ್ಲಿ ಕಸ ನಿರ್ವಹಣೆಗೆ ಪರಿಹಾರ ಕಂಡುಕೊಳ್ಳಬೇಕೆಂದು ಅಧಿಕಾರಿಗಳು ನಿರ್ಧರಿಸಲಿದ್ದಾರೆ ಎಂದು ಹೇಳಿದರು.

ಮೆಟ್ರೋ 2015ಕ್ಕೆ ಪೂರ್ಣ: 42.3 ಕಿ.ಮೀ ಉದ್ದದ ಮೊದಲನೇ ಹಂತದ ಮೆಟ್ರೋ ಕಾಮಗಾರಿ 2015ರ ಸೆಪ್ಟೆಂಬರ್‌ನಲ್ಲಿ ಪೂರ್ಣಗೊಳ್ಳಲಿದೆ. ನಂತರ ಅಧಿಕಾರಿಗಳು ಪರೀಕ್ಷಿಸಿ ಪ್ರಮಾಣಪತ್ರ ನೀಡಲಿದ್ದಾರೆ. ಕಾಮಗಾರಿಯನ್ನು ಪೂರ್ಣವಾಗಿ ಪರಿಶೀಲನೆ ನಡೆಸಿದ ನಂತರವೇ ಸಾರ್ವಜನಿಕ ಬಳಕೆಗೆ ನೀಡಲಾಗುವುದು. ಇನ್ನು 72 ಕಿ.ಮೀ ಉದ್ದದ 2ನೇ ಹಂತದ ಮೆಟ್ರೋ ಕಾಮಗಾರಿ 5 ವರ್ಷಗಳಲ್ಲಿ ಪೂರ್ಣಗೊಳ್ಳಲಿದೆ. 2ನೇ ಹಂತದಲ್ಲಿ 61 ನಿಲ್ದಾಣಗಳಿದ್ದು, ಇದಕ್ಕೆ 26,405 ಕೋಟಿ ವೆಚ್ಚವಾಗಲಿದೆ ಎಂದರು.

ಇದೇ ವೇಳೆ ರಾಜ್ಯಪಾಲರ ರಾಜಿನಾಮೆ ಬಗ್ಗೆ ಪ್ರತಿಕ್ರಿಯಿಸಿದ ನಾಯ್ಡು, ರಾಜ್ಯಪಾಲರಿಂದ ರಾಜಿನಾಮೆ ಪಡೆಯುವ ಬಗ್ಗೆ ಟೀಕಿಸುವ ಕಾಂಗ್ರೆಸ್ಸಿಗರು ತಾವು ಮಾಡಿರುವುದನ್ನು ಮೊದಲು ನೋಡಿಕೊಳ್ಳಲಿ ಎಂದು ವ್ಯಂಗ್ಯವಾಡಿದರು.

ಕೆಲವು ರಾಜ್ಯಪಾಲರು ತಾವಾಗಿಯೇ ರಾಜಿನಾಮೆ ನೀಡಿದ್ದಾರೆ. ರಾಜಿನಾಮೆ ಪಡೆಯುವುದು ಆಯಾ ಸರ್ಕಾರಕ್ಕೆ ಬಿಟ್ಟ ವಿಚಾರ. ಇದು ರಾಜಕೀಯ ನೇಮಕಾತಿಯೇ ವಿನಾ ಚುನಾವಣೆಯಿಂದ ಆಯ್ಕೆಯಾದುದಲ್ಲ. ಈ ವಿಚಾರವನ್ನು ವಿವಾದವಾಗಿ ಮಾಡುವ ರಾಜನೀತಿ ಒಳ್ಳೆಯದಲ್ಲ ಎಂದು ಕಿಡಿಕಾರಿದರು.

ಸಿಎಂ ಭೆಟಿ ಮಾಡಿದ ನಾಯ್ಡು: ಮೆಟ್ರೋ ಕಾಮಗಾರಿ ಪರಿಶೀಲನೆಗೂ ಮುನ್ನ ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾಗೆ ತೆರಳಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಕೇಂದ್ರ ಸಚಿವ ವೆಂಕಯ್ಯ ನಾಯ್ಡು ಭೇಟಿ ಮಾಡಿದರು. ಭೇಟಿ ಬಳಿಕ ಮಾತನಾಡಿದ ನಾಯ್ಡು, ಇದೊಂದು ಔಪಚಾರಿಕ ಭೇಟಿ ಅಷ್ಟೆ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement