ಸಾಮಾಜಿಕ ತಾಣಗಳಲ್ಲಿ ಹಿಂದಿ ಬಳಕೆ ವಿರೋಧಿಸಿ ಪ್ರಧಾನಿಗೆ ಜಯಾ ಪತ್ರ
ಸಾಮಾಜಿಕ ಜಾಲತಾಣಗಳಲ್ಲಿ ಹಿಂದಿ ಬಳಕೆಗೆ ನಿನ್ನೆಯಷ್ಟೆ ಡಿಎಂಕೆ ಮುಖ್ಯಸ್ಥ ಹಾಗೂ ತಮಿಳುನಾಡು...
ಚೆನ್ನೈ: ಸಾಮಾಜಿಕ ಜಾಲತಾಣಗಳಲ್ಲಿ ಹಿಂದಿ ಬಳಕೆಗೆ ನಿನ್ನೆಯಷ್ಟೆ ಡಿಎಂಕೆ ಮುಖ್ಯಸ್ಥ ಹಾಗೂ ತಮಿಳುನಾಡು ಮಾಜಿ ಮುಖ್ಯಮಂತ್ರಿ ಎಂ.ಕರುಣಾನಿಧಿ ಅವರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಇದೀಗ ತಮಿಳುನಾಡು ಮುಖ್ಯಮಂತ್ರಿ ಜೆ.ಜಯಲಲಿತಾ ಸಹ ವಿರೋಧ ವ್ಯಕ್ತಪಡಿಸಿದ್ದು, ಈ ಸಂಬಂಧ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಶುಕ್ರವಾರ ಪತ್ರ ಬರೆದಿದ್ದಾರೆ.
ರಾಜಕೀಯ ನಾಯಕರು ಹಿಂದಿ ಭಾಷೆಯನ್ನು ಬಳಸಬೇಕು ಎಂಬ ಕೇಂದ್ರ ಗೃಹ ಸಚಿವಾಲಯದ ಆದೇಶಕ್ಕೆ ಈ ಕೂಡಲೇ ತಿದ್ದುಪಡಿ ತರಬೇಕು ಎಂದು ಜಯಾ ತಮ್ಮ ಪತ್ರದಲ್ಲಿ ಒತ್ತಾಯಿಸಿದ್ದಾರೆ. ಅಲ್ಲದೆ ಸಾಮಾಜಿಕ ತಾಣಗಳಲ್ಲಿ ಹಿಂದಿ ಬದಲು ಇಂಗ್ಲಿಷ್ ಸಂವಹನ ಮಾಧ್ಯಮವಾಗಲಿ ಎಂದು ಹೇಳಿದ್ದಾರೆ.
ತಮಿಳುನಾಡಿನ ವಿಚಾರದಲ್ಲಿ ಹಿಂದಿಗೆ ಪ್ರಾಮುಖ್ಯತೆ ನೀಡುವುದು ಅತೀ ಸೂಕ್ಷ್ಮ ವಿಚಾರ. ತಮಿಳಿಗರಿಗೆ ತಮ್ಮ ಭಾಷೆಯ ಬಗ್ಗೆ ತುಂಬಾ ಗೌರವ ಮತ್ತು ಭಾವನಾತ್ಮಕ ಸಂಬಂಧ ಇದೆ ಎಂದು ತಮಿಳುನಾಡು ಸಿಎಂ ಪತ್ರದಲ್ಲಿ ತಿಳಿಸಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ, ರಾಜಕೀಯ ನಾಯಕರು ಹಿಂದಿ ಭಾಷೆಯಲ್ಲಿ ಸಂವಹನ ನಡೆಸುವುದನ್ನು ಅಭ್ಯಸಿಸಬೇಕೆಂದು ಎಲ್ಲಾ ರಾಜ್ಯಗಳಿಗೆ ಕೇಂದ್ರ ಗೃಹ ಇಲಾಖೆ ಸೂಚನೆ ನೀಡಿತ್ತು. ಈ ಹಿನ್ನೆಲೆಯಲ್ಲಿ, ಕಾರವಾಗಿ ಪ್ರತಿಕ್ರಿಯಿಸಿದ್ದ ಡಿಎಂಕೆ ಮುಖಂಡ ಕರುಣಾನಿಧಿ, 'ಮೋದಿ ಸರ್ಕಾರ ಹಿಂದಿ ಭಾಷೆಯನ್ನು ಬೆಳೆಸುವುದರ ಜೊತೆಗೆ, ಪ್ರಾದೇಶಿಕ ಭಾಷೆಗಳನ್ನು ತುಳಿಯುವ ಉದ್ದೇಶ ಹೊಂದಿದೆ. ಹಿಂದಿ ಭಾಷೆ ಬಳಸದ ಜನರನ್ನು ದ್ವಿತೀಯ ದರ್ಜೆಯ ನಾಗರಿಕರಂತೆ ನೋಡಲಾಗುತ್ತಿದೆ' ಎಂದು ಟೀಕಿಸಿದ್ದರು.
ಇನ್ನು ಈ ಬಗ್ಗೆ ಇಂದು ಬೆಂಗಳೂರಿನಲ್ಲಿ ವರದಿಗಾರರಿಗೆ ಪ್ರತಿಕ್ರಿಯಿಸಿರುವ ಕೇಂದ್ರ ಸಚಿವ ಎಂ.ವೆಂಕಯ್ಯ ನಾಯ್ಡು ಅವರು, ಹಿಂದಿಯನ್ನು ಬಲವಂತವಾಗಿ ಹೇರುತ್ತಿಲ್ಲ. ಹಿಂದಿ ನಮ್ಮ ರಾಷ್ಟ್ರ ಭಾಷೆ. ಹೀಗಾಗಿ ಹೆಚ್ಚು ಹಿಂದಿ ಬಳಸುವಂತೆ ಸೂಚಿಸಲಾಗಿದೆ. ಈ ಸಂಬಂಧ ಕೇಂದ್ರ ಸರ್ಕಾರ ಯಾವುದೇ ಆದೇಶ ಹೊರಡಿಸಿಲ್ಲ ಎಂದು ಸ್ಪಷ್ಟಪಡಿಸಿದರು. ಅಲ್ಲದೆ ಪ್ರಾದೇಶಿಕ ಭಾಷೆಗಳ ಅಭಿವೃದ್ಧಿಗೆ ಕೇಂದ್ರ ಸರ್ಕಾರ ಬದ್ಧವಾಗಿದೆ ಎಂದರು.
ಇದೇ ವೇಳೆ ರಾಜ್ಯಪಾಲರ ರಾಜಿನಾಮೆ ಬಗ್ಗೆ ಪ್ರತಿಕ್ರಿಯಿಸಿದ ನಾಯ್ಡು, ರಾಜಿನಾಮೆ ನೀಡುವಂತೆ ಸರ್ಕಾರ ಯಾರ ಮೇಲೂ ಒತ್ತಡ ಹಾಕಿಲ್ಲ. ಬದಲಾಗಿ ಅವರೇ ಸ್ವಯಂಪ್ರೇರಿತವಾಗಿ ರಾಜಿನಾಮೆ ನೀಡುತ್ತಿದ್ದಾರೆ ಎಂದು ತಿಳಿಸಿದರು.