ದೆಹಲಿ ವಿವಿ ಪ್ರವೇಶ ವಿವಾದ: ಯುಜಿಸಿ ಬೆಂಬಲಕ್ಕೆ ಕೇಂದ್ರ
ವಿಶ್ವವಿದ್ಯಾಲಯ ಅನುದಾನ ಆಯೋಗ(ಯುಜಿಸಿ)ದ..
ನವದೆಹಲಿ: ವಿಶ್ವವಿದ್ಯಾಲಯ ಅನುದಾನ ಆಯೋಗ(ಯುಜಿಸಿ)ದ ಬೆಂಬಲಕ್ಕೆ ನಿಂತಿರುವ ಕೇಂದ್ರ ಸರ್ಕಾರ, ವಿವಾದಾತ್ಮಕ ನಾಲ್ಕು ವರ್ಷಗಳ ಪದವಿ ಶಿಕ್ಷಣ ಪ್ರವೇಶಕ್ಕೆ ಸಂಬಂಧಿಸಿದಂತೆ ದೆಹಲಿ ವಿಶ್ವವಿದ್ಯಾಲಯ ಮತ್ತು ಯುಜಿಸಿ ನಡುವಿನ ವಿವಾದದಲ್ಲಿ ತಾನು ಮಧ್ಯಪ್ರವೇಶಿಸುವುದಿಲ್ಲ ಎಂದು ಕೇಂದ್ರ ಮಾನವ ಸಂಪನ್ಮೂಲ ಸಚಿವೆ ಸ್ಮೃತಿ ಇರಾನಿ ಅವರು ಸೋಮವಾರ ಹೇಳಿದ್ದಾರೆ.
ಯುಜಿಸಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸ್ಮೃತಿ ಇರಾನಿ, ಯುಜಿಸಿಯೇ ಸುಪ್ರೀಂ ಅನ್ನುವುದು ಸೆಂಟ್ ಸ್ಟೆಫಾನ್ಸ್ ಮತ್ತು ದೆಹಲಿ ವಿವಿಗೆ ಗೊತ್ತು. ಇದರಲ್ಲಿ ನಮ್ಮ ಸಚಿವಾಲ ಹಸ್ತಕ್ಷೇಪ ಮಾಡುವುದಿಲ್ಲ ಮತ್ತು ಯುಜಿಸಿ ಆದೇಶವನ್ನು ದೆಹಲಿ ವಿವಿ ಪಾಲಿಸಬೇಕು ಎಂದಿದ್ದಾರೆ.
ಸ್ಮೃತಿ ಇರಾನಿ ಅವರು ಯುಜಿಸಿ ಅಧಿಕಾರಿಗಳೊಂದಿಗೆ ಸಭೆ ನಡೆಸುತ್ತಿದ್ದರೆ, ಸಚಿವಾಲಯದ ಹೊರಗಡೆ ಮೂರು ವರ್ಷಗಳ ಪದವಿ ಶಿಕ್ಷಣವನ್ನು ನಾಲ್ಕು ವರ್ಷಕ್ಕೆ ಏರಿಸುವ ವಿವಾದಾತ್ಮಕ ಕೋರ್ಸ್ ವಿರುದ್ಧ ಹಲವು ವಿದ್ಯಾರ್ಥಿ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿದ್ದವು.
ತಮ್ಮ ಸಚಿವಾಲಯದ ಮುಂದೆ ವಿದ್ಯಾರ್ಥಿ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿರುವುದು ಗಮನಕ್ಕೆ ಬರುತ್ತಿದ್ದಂತೆ ಸ್ಮೃತಿ ಇರಾನಿ ಅವರು ಯುಜಿಸಿ ಅಧಿಕಾರಿಗಳ ತುರ್ತು ಸಭೆ ಕರೆದಿದ್ದರು.