ಮೂವರು ಅಲ್ ಝಜೀರಾ ಖಾಸಗಿ ಮಾಧ್ಯಮ ಪತ್ರಕರ್ತರಿಗೆ 7 ವರ್ಷ ಜೈಲು
ಕೈರೊ: ಭಯೋತ್ವಾದನೆಗೆ ನೆರವು ನೀಡಿದ ಆರೋಪದ ಮೇಲೆ ಅಲ್ ಝಜೀರಾ ಮಾಧ್ಯಮ ಸಂಸ್ಥೆಗೆ ಸೇರಿದ ಮೂವರು ಪತ್ರಕರ್ತರಿಗೆ ಈಜಿಪ್ಟಿನಲ್ಲಿ ಏಳು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ.
ಕಳೆದ ಡಿಸೆಂಬರಿನಲ್ಲಿ ಕೈರೊದ ಹೋಟೆಲೊಂದರ ಮೇಲೆ ದಾಳಿ ನಡೆದಾಗ ಈ ಪತ್ರಕರ್ತರು ಘಟನಾ ಸ್ಥಳದಲ್ಲಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದರು. ಈಜಿಪ್ಟಿನ ಉಚ್ಛಾಟಿತ ಅಧ್ಯಕ್ಷ ಮೊಹಮದ್ ಮೊರ್ಸಿಗೆ ಬೆಂಬಲ ನೀಡುತ್ತಿದ್ದ ಇಸ್ಲಾಂ ಬೆಂಬಲಿಗರ ವಿರುದ್ಧ ಯುದ್ಧ ಸಾರಿದ್ದಾಗ ಇವರೆಲ್ಲಾ ಸಿಕ್ಕಿಬಿದ್ದಿದ್ದರು.
ತಪ್ಪು ಸುದ್ದಿ ಹರಡಿದ ಮತ್ತು ನಿಷೇಧಿತ ಮುಸ್ಲಿಂ ಸಂಘಟನೆಯನ್ನು ಬೆಂಬಸಿಲಿದ ಆರೋಪದ ಮೇಲೆ ಆಸ್ಟ್ರೇಲಿಯಾದ ಪೀಟರ್ ಗ್ರೆಸ್ಟೆ, ಕೆನಡಾ-ಈಜಿಪ್ಟ್ ರಾಷ್ಟ್ರೀಯ ಮೊಹಮಸ್ ಫಹಾಮಿ ಮತ್ತು ಈಜಿಪ್ಟಿನ ಬಹೆರ್ ಮೊಹಮದ್ ಅವರಿಗೆ 7 ವರ್ಷಗಳ ಜೈಲು ಶಿಕ್ಷೆ ವಿಧಿಸಿದ್ದು, ಅಕ್ರಮ ಶಸ್ತ್ರಾಸ್ತ್ರ ಹೊಂದಿದ್ದ ಹೆಚ್ಚುವರಿ ಆರೋಪದ ಮೇಲೆ ಬಹೆರ್ ಮೊಹಮದ್ಗೆ ಹೆಚ್ಚುವರಿಯಾಗಿ ಮೂರು ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ.
ಮೋರ್ಸಿಗೆ ಬೆಂಬಲ ಸೂಚಿಸಿದ್ದ ಈ ಮುಸ್ಲಿಂ ಸಂಘಟನೆಯನ್ನು ಭಯೋತ್ಪಾದಕ ಸಂಘಟನೆಯೆಂದು ಈಜಿಪ್ಟ್ ಆಡಳಿತ ನಿಷೇಧಿಸಿತ್ತು. ಜುಲೈ 3ರಂದು ಸೇನಾದಂಗೆಯಲ್ಲಿ ಅಧ್ಯಕ್ಷ ಮೊಹಮದ್ ಮೋರ್ಸಿಯನ್ನು ಉಚ್ಛಾಟಿಸಿದ್ದ ನಂತರ ನಡೆದ ಗಲಭೆ ಹಾಗೂ ಪ್ರತಿಭಟನೆಗಳನ್ನು ಈ ಪತ್ರಕರ್ತರು ವ್ಯಾಪಕವಾಗಿ ಸುದ್ದಿ ಮಾಡಿದ್ದೇ ಅವರಿಗೆ ಕಂಟಕವಾಗಿ ಪರಿಣಮಿಸಿದೆ.
ಪ್ರತಿಭಟನೆಗಳಲ್ಲಿ ತೊಡಗಿದ್ದ ನೂರಾರು ಮಂದಿಯನ್ನು ಸೇನೆಯು ಹತ್ಯೆ ಮಾಡಿತ್ತು. ಅಲ್ಲದೆ ಸಾವಿರಾರು ಮಂದಿಯನ್ನು ಜೈಲಿಗಟ್ಟಿತ್ತು.