ಕೊನೆಕ್ಷಣದವರೆಗೂ ಎಂಎಚ್-370 ವಿಮಾನ ಪೈಲೆಟ್ ನಿಯಂತ್ರಣದಲ್ಲಿತ್ತು
ಮಾರ್ಚ್ 8ರಂದು ನಿಗೂಢವಾಗಿ...
ಕ್ಯಾನ್ಬೆರಾ(ಆಸ್ಟ್ರೇಲಿಯಾ): ಮಾರ್ಚ್ 8ರಂದು ನಿಗೂಢವಾಗಿ ನಾಪತ್ತೆಯಾಗಿದ್ದ ಎಂ.ಎಚ್-370 ಮಲೇಷ್ಯಾ ವಿಮಾನ ದುರಂತಕ್ಕೀಡಾಗುವ ಕ್ಷಣದವರೆಗೂ ಪೈಲಟ್ಗಳ ನಿಯಂತ್ರಣದಲ್ಲೇ ಇತ್ತು ಎಂಬ ಅಂತಿಮ ತೀರ್ಮಾನಕ್ಕೆ ತನಿಖಾಧಿಕಾರಿಗಳು ಬಂದಿದ್ದಾರೆ.
ಎಂಎಚ್-370 ವಿಮಾನಕ್ಕೆ ಗಗನದಲ್ಲಿ ಯಾವುದೇ ತೊಂದರೆಗೊಳಗಾಗಿಲ್ಲ, ವಿಮಾನದೊಂದಿಗಿನ ಸಂಪರ್ಕ ಕಡಿದು ಹೋಗಿ ಕೆಲವು ಗಂಟೆಗಳವರೆಗೂ ಅದು ಪೈಲೆಟ್ಗಳ ನಿಯಂತ್ರಣದಲ್ಲೇ ಹಾರಾಡುತ್ತಿತ್ತು. ಅಂತಿಮವಾಗಿ ಇಂಧನ ಖಾಲಿಯಾಗಿ ದಕ್ಷಿಣ ಹಿಂದೂ ಮಹಾಸಾಗರದಲ್ಲಿ ಬಿದ್ದಿರಬೇಕು ಎಂದು ತನಿಖಾಧಿಕಾರಿಗಳು ಹೇಳಿದ್ದಾರೆ.
ಹಿಂದೂ ಮಹಾಸಾಗರದಲ್ಲಿ ನೂರಾರು ಮೈಲಿಗಳಷ್ಟು ದೂರ ನಿಶ್ಪ್ರಯೋಜಕ ಹುಡುಕಾಟ ನಡೆಸಿದ್ದು, ಕೊನೆಗೆ ಮಲೇಷ್ಯಾ ಮಿಲಿಟರಿ ರಾಡಾರ್ ಮಾಹಿತಿಯನ್ನು ಪುನರ್ ಪರಿಶೀಲಿಸಿದ ಬಳಿಕ ತನಿಖಾಧಿಕಾರಿಗಳು ಈ ತೀರ್ಮಾನಕ್ಕೆ ಬಂದಿದ್ದಾರೆ. ಇನ್ಮರ್ಸ್ಯಾಟ್ ಉಪಗ್ರಹದೊಂದಿಗೆ ವಿಮಾನದ ವಿದ್ಯುನ್ಮಾನ ಸಂದೇಶಗಳು ವಿನಿಮಯವಾಗಿದ್ದು, ರಾಡಾರ್ ಮಾಹಿತಿ ಪ್ರಕಾರ ವಿಮಾನ ಹಾರುತ್ತಿದ್ದ ಎತ್ತರದ ಅಂದಾಜು ತಪ್ಪಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಮಾರ್ಚ್ 8 ರಂದು ಕೌಲಾಲಂಪುರದಿಂದ ಬೀಜಿಂಗ್ನತ್ತ ಹೊರಟಿದ್ದ ಬೋಯಿಂಗ್ 777-200 ವಿಮಾನದಲ್ಲಿ 239 ಪ್ರಯಾಣಿಕರಿದ್ದು, ವಿಮಾನ ಇಂಡೋನೇಷ್ಯಾದ ಸುಮಾತ್ರಾ ದ್ವೀಪದ ಸಮೀಪ ರಾಡಾರ್ ಪರದೆಯಿಂದ ಕಣ್ಮರೆಯಾಗಿತ್ತು. ಆ ವೇಳೆಗೆ ವಿಮಾನ 45 ಸಾವಿರ ಅಡಿಗಳಷ್ಟು ಎತ್ತರದಲ್ಲಿ ಹಾರಾಡುತ್ತಿತ್ತು ಎಂದು ರಾಡಾರ್ ಮಾಹಿತಿ ತಿಳಿಸಿತ್ತು.