ನಿತೀಶ್ ಮುಖ್ಯಮಂತ್ರಿ ಅಭ್ಯರ್ಥಿ ಅಲ್ಲ: ಜೆಡಿಯು ಶಾಸಕ
ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಪಕ್ಷದ ಮುಖ್ಯಸ್ಥ ನಿತೀಶ್ ಕುಮಾರ್..
ನವದೆಹಲಿ: ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಪಕ್ಷದ ಮುಖ್ಯಸ್ಥ ನಿತೀಶ್ ಕುಮಾರ್ ಬದಲು ಜಿತನ್ ರಾಮ್ ಮಂಜಿ ಅವರೇ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಜೆಡಿಯು ಶಾಸಕ ಗ್ಯಾನೇಂದ್ರ ಸಿಂಗ್ ಹೇಳಿದ್ದಾರೆ. ಜನತಾ ದಳ (ಸಂಯುಕ್ತ) ಪಕ್ಷದ ರೆಬೆಲ್ ಶಾಸಕ ಗ್ಯಾನೇಂದ್ರ ಸಿಂಗ್ ಮಂಗಳವಾರ ಗೃಹಸಚಿವ ರಾಜ್‌ನಾಥ್ ಸಿಂಗ್ ಅವರನ್ನು ಭೇಟಿ ಮಾಡಿದ್ದು, ಜೆಡಿಯುನಲ್ಲಿರುವ ಭಿನ್ನಮತ ಇದೀಗ ಸ್ಪಷ್ಟವಾಗುತ್ತಿದೆ.
ನಿತೀಶ್ ಕುಮಾರ್ ಅವರ ಆಪ್ತ ಎಂದೇ ಗುರುತಿಸಲ್ಪಡುವ ಗ್ಯಾನೇಂದ್ರ ಸಿಂಗ್, ನನ್ನೊಂದಿಗೆ 2 ಡಜನ್‌ಗಿಂತಲೂ ಹೆಚ್ಚು ಶಾಸಕರಿದ್ದಾರೆ. ಅವರೆಲ್ಲರೂ ಈ ವಿಷಯಕ್ಕೆ ಸಮ್ಮತಿ ಸೂಚಿಸಿದ್ದಾರೆ. ಮುಂದಿನ ಚುನಾವಣೆಯಲ್ಲಿ ಮಂಜಿ ಅವರನ್ನೇ ಕಣಕ್ಕಿಳಿಸಲಾಗುವುದು. ಅವರೇ ಮುಖ್ಯಮಂತ್ರಿ ಸ್ಥಾನಕ್ಕೆ ಸ್ಪರ್ಧಿಸಲಿದ್ದಾರೆ ಎಂದು ಹೇಳಿದ್ದಾರೆ.
ಆದಾಗ್ಯೂ, ಮಂಜಿ ಮುಖ್ಯಮಂತ್ರಿ ಸ್ಥಾನಕ್ಕೆ ಅರ್ಹರು. ಈ ಬಾರಿಯ ಚುನಾವಣೆಯಲ್ಲಿ ನಿತೀಶ್ ಕುಮಾರ್ ಅಲ್ಲ, ಮಂಜಿ ನಮ್ಮ ಅಭ್ಯರ್ಥಿ ಎಂದು ಗ್ಯಾನೇಂದ್ರ ಸಿಂಗ್ ಹೇಳಿಕೆ ನೀಡಿದ್ದಾರೆ.