ಕುಡಿಯುವ ನೀರಿನ ದರ ಏರಿಕೆ ಅನಿವಾರ್ಯ: ಸಿಎಂ
ಸಾರಿಗೆ ಹಾಗೂ ವಿದ್ಯುತ್ ದರ ಏರಿಕೆ ನಂತರ ಈಗ ಮತ್ತೊಂದು ಬೆಲೆ ಏರಿಕೆಯ ಬರೆ ಹಾಕಲು...
ಬೆಂಗಳೂರು: ಸಾರಿಗೆ ಹಾಗೂ ವಿದ್ಯುತ್ ದರ ಏರಿಕೆ ನಂತರ ಈಗ ಮತ್ತೊಂದು ಬೆಲೆ ಏರಿಕೆಯ ಬರೆ ಹಾಕಲು ರಾಜ್ಯ ಸರ್ಕಾರ ಮುಂದಾಗಿದ್ದು, ಕುಡಿಯುವ ನೀರಿನ ದರ ಏರಿಕೆ ಅನಿವಾರ್ಯ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗುರುವಾರ ಹೇಳಿದ್ದಾರೆ.
ಇಂದು ವಿಧಾನ ಪರಿಷತ್‌ನಲ್ಲಿ ಪ್ರಶ್ನೋತ್ತರ ವೇಳೆಯಲ್ಲಿ ಮಾತನಾಡಿದ ಸಿಎಂ, ಬೆಂಗಳೂರು ಜಲ ಮಂಡಳಿಯಲ್ಲಿ ಶೇ.51ರಷ್ಟು ಮಾತ್ರ ಹಣ ಮತ್ತು ನೀರು ಸದುಪಯೋಗವಾಗುತ್ತಿದೆ. ಮಂಡಳಿಯಲ್ಲಿ ಅಧಿಕಾರಿಗಳು ಸಮರ್ಥವಾಗಿ ಕಾರ್ಯನಿರ್ವಹಿಸುತ್ತಿಲ್ಲ. ಹೀಗಾಗಿ ಜಲ ಮಂಡಳಿ ನಷ್ಟದಲ್ಲಿದೆ. ಈ ನಷ್ಟವನ್ನು ಸರಿದೂಗಿಸಲು ನೀರಿನ ದರ ಏರಿಕೆ ಅನಿರ್ಯಾ ಎಂದರು.
ಕಳೆದ 9 ವರ್ಷಗಳಿಂದ ನೀರಿನ ದರ ಪರಿಷ್ಕರಣೆಯಾಗಿಲ್ಲ. ಅಲ್ಲದೆ ಜಲ ಮಂಡಳಿಯ ಆರ್ಥಿಕ ಪರಿಸ್ಥಿತಿಯೂ ಸರಿಯಿಲ್ಲ. ಹೀಗಾಗಿ ನೀರಿನ ದರ ಏರಿಕೆ ಅನಿವಾರ್ಯವಾಗಿದೆ. ಒಂದು ವೇಳೆ ದರ ಏರಿಕೆ ಮಾಡದಿದ್ದರೆ ಜಲ ಮಂಡಳಿ ಸಂಪೂರ್ಣ ನೆಲ ಕಚ್ಚಿ ಹೋಗುತ್ತದೆ. ಮುಂದಿನ ದಿನಗಳಲ್ಲಿ ಜಲ ಮಂಡಳಿಯನ್ನು ಮುಚ್ಚಬೇಕಾದ ಪರಿಸ್ಥಿತಿ ಬರಬಹುದು ಎಂದು ಸಿಎಂ ಹೇಳಿದರು.
'ಹೊರ ರಾಜ್ಯಗಳಲ್ಲಿ ಯಾವ ರೀತಿ ನೀರಿನ ದರ ಪರಿಷ್ಕರಣೆ ಮಾಡಲಾಗಿದೆ ಎಂಬುದನ್ನು ಅಧ್ಯಯನ ಮಾಡಲಾಗುತ್ತದೆ. ಅದು ಒಂದು ಅಂತಿಮ ಹಂತಕ್ಕೆ ಬಂದ ನಂತರ ಜಲಮಂಡಳಿ ದರ ಹೆಚ್ಚಳದ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಿದೆ' ಎಂದು ಸಿಎಂ ಸಿದ್ದು ತಿಳಿಸಿದ್ದಾರೆ.