ಪಠ್ಯ ಸಾಮಾಗ್ರಿ ಖರೀದಿಸಲಾಗದೆ ಬಾಲಕಿ ಆತ್ಮಹತ್ಯೆ
ಒಡಿಶಾದ ಗಂಜಂ ಜಿಲ್ಲೆಯಲ್ಲಿ ಬಡಕುಟುಂಬದ ಬಾಲಕಿಯೊಬ್ಬಳು..
ಭುಬನೇಶ್ವರ್: ಒಡಿಶಾದ ಗಂಜಂ ಜಿಲ್ಲೆಯಲ್ಲಿ ಬಡಕುಟುಂಬದ ಬಾಲಕಿಯೊಬ್ಬಳು ಬಡತನದಿಂದ ಪೆನ್ಸಿಲ್, ನೋಟ್ ಬುಕ್ ಖರೀದಿಸಲು ಸಾಧ್ಯವಾಗದೇ ಇರುವುದಕ್ಕೆ ನೊಂದು ಆತ್ಮಹತ್ಯೆಗೈದ ಘಟನೆ ವರದಿಯಾಗಿದೆ.
ಏಳನೇ ತರಗತಿಯಲ್ಲಿ ಕಲಿಯುತ್ತಿರುವ 14ರ ಬಾಲಕಿ ಆತ್ಮಹತ್ಯೆಗೆ ಶರಣಾಗಿದ್ದು, ಇದೀಗ ಪ್ರಸ್ತುತ ಜಿಲ್ಲೆಯಲ್ಲಿ ಸರ್ವ ಶಿಕ್ಷಾ ಅಭಿಯಾನ ಸರಿಯಾಗಿ ಕಾರ್ಯವೆಸಗುತ್ತಿದೆಯೇ? ಎಂಬ ಪ್ರಶ್ನೆಯನ್ನು ಹುಟ್ಟು ಹಾಕಿದೆ. ಯಾಕೆಂದರೆ ಸರ್ವ ಶಿಕ್ಷಾ ಅಭಿಯಾನದಲ್ಲಿ 14ರ ಹರೆಯದವರೆಗಿನ ಮಕ್ಕಳಿಗೆ ಉಚಿತ ಪಠ್ಯ ಸಾಮಾಗ್ರಿಗಳನ್ನು ಒದಗಿಸಲಾಗುತ್ತದೆ. ಈ ಬಗ್ಗೆ ತನಿಖೆ ನಡೆಸುವಂತೆ ಜಿಲ್ಲಾಧಿಕಾರಿಗಳು ಆದೇಶ ನೀಡಿದ್ದಾರೆ.
ಈ ಬಗ್ಗೆ ವರದಿ ಸಲ್ಲಿಸುವಂತೆ ನಾನು ಸರ್ವ ಶಿಕ್ಷಾ ಅಭಿಯಾನದ ಪ್ರಾಜೆಕ್ಟ್ ಡೈರೆಕ್ಟರ್ಗೆ ಆದೇಶ ನೀಡಿದ್ದೇನೆ. ವರದಿ ಸಿಕ್ಕಿದ ನಂತರ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಗಂಜಂ ಜಿಲ್ಲಾಧಿಕಾರಿ ಪ್ರೇಮ್ಚಂದ್ ಚೌಧರಿ ಹೇಳಿದ್ದಾರೆ.
ಜಯಂತಿ ನಾಯ್ಕ್ ಎಂಬ ಬಾಲಕಿ ಬುಧವಾರ ಸೀಮೆ ಎಣ್ಣೆ ಸುರಿದು ಆತ್ಮಹತ್ಯೆಗೈದಿದ್ದಳು. ಮನೆಯಲ್ಲಿ ಹೊಗೆ ಬರುತ್ತಿರುವುದನ್ನು ಗಮನಿಸಿದ ನೆರೆಹೊರೆಯವರು ಆಕೆಯ ರಕ್ಷಣೆಗೆ ಧಾವಿಸಿದರೂ, ಬಾಲಕಿಯನ್ನು ರಕ್ಷಿಸಲು ಸಾಧ್ಯವಾಗಲಿಲ್ಲ.
ಬಾಲಕಿಯ ಹೆತ್ತವರಾದ ಬಿಜೈ ನಾಯ್ಕ್ ಮತ್ತು ಈಶ್ವರಿ ನಾಯ್ಕ್ ದಿನಗೂಲಿ ಕೆಲಸದವರಾಗಿದ್ದಾರೆ. ಮನೆಯಲ್ಲಿ ಕಿತ್ತು ತಿನ್ನುವ ಬಡತನವಿದ್ದು ಪಠ್ಯ ಸಾಮಾಗ್ರಿಗಳನ್ನು ಖರೀದಿಸಲು ಸಾಧ್ಯವಾಗದೇ ಇರುವುದಕ್ಕೆ ಬಾಲಕಿ ಈ ಕೃತ್ಯ ಕೈಗೊಂಡಿದ್ದಾಳೆ ಎಂದು ಪೊಲೀಸರು ಹೇಳಿದ್ದಾರೆ.