ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಸೋನಿಯಾ, ರಾಹುಲ್‌ಗೆ ಸಮನ್ಸ್

'ನ್ಯಾಷನಲ್ ಹೆರಾಲ್ಡ್‌' ಪ್ರಕರಣ ಸಂಬಂಧ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ದೆಹಲಿಯ ಪಟಿಯಾಲ ಕೋರ್ಟ್ ಸಮನ್ಸ್ ಜಾರಿ ಮಾಡಿದೆ.

Lingaraj Badiger
Updated On : 26 Jun 2014, 3:16 am

ನವದೆಹಲಿ: 'ನ್ಯಾಷನಲ್ ಹೆರಾಲ್ಡ್‌' ಪ್ರಕರಣ ಸಂಬಂಧ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ದೆಹಲಿಯ ಪಟಿಯಾಲ ಕೋರ್ಟ್ ಗುರುವಾರ ಸಮನ್ಸ್ ಜಾರಿ ಮಾಡಿದೆ.

ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ 'ನ್ಯಾಷನಲ್ ಹೆರಾಲ್ಡ್‌' ಆಸ್ತಿ ಕಬಳಿಸಲು ಯತ್ನಿಸುತ್ತಿದ್ದಾರೆ ಎಂದು ಆರೋಪಿಸಿ ಬಿಜೆಪಿಯ ಸುಬ್ರಮಣಿಯನ್ ಸ್ವಾಮಿ ಅವರು ದೂರು ದಾಖಲಿಸಿದ್ದರು. ದೂರಿನ ವಿಚಾರಣೆ ನಡೆಸಿದ ಕೋರ್ಟ್, ಪ್ರಕರಣ ಸಂಬಂಧ ಆಗಸ್ಟ್ 7ರೊಳಗೆ ವಿಚಾರಣೆಗೆ ಹಾಜರಾಗುವಂತೆ ಕಾಂಗ್ರೆಸ್ ಅಧ್ಯಕ್ಷೆ ಹಾಗೂ ಉಪಾಧ್ಯಕ್ಷರಿಗೆ ಸೂಚಿಸಿದೆ.

ಸ್ವಾಮಿ ದಾಖಲಿಸಿದ್ದ ಖಾಸಗಿ ದೂರಿನ ವಿಚಾರಣೆ ನಡೆಸಿದ ನ್ಯಾ. ಗೋಮತಿ ಮನೋಕಾ ಅವರು, ಪ್ರಮುಖ ಆರೋಪಿಗಳ ವಿರುದ್ಧ ಸಾಕ್ಷ್ಯಾಧಾರಗಳು ಪತ್ತೆಯಾಗಿದ್ದು, ಆಗಸ್ಟ್ 7ರೊಳಗೆ ವಿಚಾರಣೆಗೆ ಹಾಜರಾಗುವಂತೆ ಎಲ್ಲಾ ಆರೋಪಿಗಳಿಗೂ ಕೋರ್ಟ್ ಸೂಚಿಸುತ್ತದೆ ಎಂದಿದ್ದಾರೆ.

ಪ್ರಕರಣ ಸಂಬಂಧ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅಲ್ಲದೆ, ಆಸ್ಕರ್ ಫರ್ನಾಂಡಿಸ್, ಮೊತಿಲಾಲ್ ವೊರಾ ಮತ್ತು ಸ್ಯಾಮ್ ಪಿತ್ರೋಡ್ ಸೇರಿದಂತೆ ಇತರೆ ಐವರು ಕಾಂಗ್ರೆಸ್ ನಾಯಕರಿಗೂ ಕೋರ್ಟ್ ಸಮನ್ಸ್ ಜಾರಿ ಮಾಡಿದೆ.

ಮಾಜಿ ಪ್ರಧಾನಿ ದಿ.ಜವಾಹರಲಾಲ್ ನೆಹರೂ ಅವರು ಸ್ಥಾಪಕ ಸಂಪಾದಕರಾಗಿದ್ದ 'ನ್ಯಾಷನಲ್ ಹೆರಾಲ್ಡ್‌' ಪತ್ರಿಕೆಗೆ ಸೇರಿದ ಸುಮಾರ 1,600 ಕೋಟಿ ರುಪಾಯಿ ಮೌಲ್ಯದ ಆಸ್ತಿ ಕಬಳಿಸಲು ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರು ಸಾರ್ವಜನಿಕ ಕಂಪನಿಯನ್ನು ಖಾಸಗಿ ಕಂಪನಿಯಾಗಿ ಮಾರ್ಪಡಿಸಿಕೊಂಡಿದ್ದಾರೆ ಎಂದು ಸುಬ್ರಮಣಿಯನ್ ಸ್ವಾಮಿ ಆರೋಪಿಸಿದ್ದಾರೆ.

''ಯಂಗ್ ಇಂಡಿಯನ್ ಎಂಬ ಹೆಸರಿನ ಖಾಸಗಿ ಕಂಪನಿ ಸ್ಥಾಪಿಸಿಕೊಂಡಿರುವ ಸೋನಿಯಾ ಮತ್ತು ರಾಹುಲ್ ಇದರ ಮೂಲಕ ಹೆರಾಲ್ಡ್ ಮಾತೃಸಂಸ್ಥೆ 'ಅಸೋಸಿಯೇಟೆಡ್ ಜರ್ನಲ್ಸ್ ಲಿಮಿಟೆಡ್' ಎಂಬ ಪಬ್ಲಿಕ್ ಕಂಪನಿಯನ್ನು ಖರೀದಿಸಿದ್ದಾರೆ. ಇದಕ್ಕಾಗಿ ಎಐಸಿಸಿ 90 ಕೋಟಿ ರೂ. ಸಾಲವನ್ನು ಯಾವುದೇ ಭದ್ರತೆಯಿಲ್ಲದೆ ಯಂಗ್ ಇಂಡಿಯನ್‌ಗೆ ನೀಡಿದೆ. ವಾಣಿಜ್ಯ ಉದ್ದೇಶಗಳಿಗಾಗಿ ರಾಜಕೀಯ ಪಕ್ಷವೊಂದು ಸಾಲ ನೀಡುವುದು ಆದಾಯ ತೆರಿಗೆ ಕಾಯ್ದೆ ಅಡಿಯಲ್ಲಿ ಕಾನೂನಿನ ಸ್ಪಷ್ಟ ಉಲ್ಲಂಘನೆ,'' ಎಂದು ಸ್ವಾಮಿ ದೂರಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement