ನಾನೂ ಮೊದಲ ಬಾರಿಯ ಸಂಸದ; ಕಲಿಯುವುದು ಸಾಕಷ್ಟಿದೆ: ಪ್ರಧಾನಿ
ನಾನೂ ಸಹ ಮೊದಲ ಬಾರಿಗೆ ಸಂಸದನಾಗಿ ಆಯ್ಕೆಯಾಗಿದ್ದೇನೆ..
ಸೂರಜ್‌ಕುಂಡ್: ನಾನೂ ಸಹ ಮೊದಲ ಬಾರಿಗೆ ಸಂಸದನಾಗಿ ಆಯ್ಕೆಯಾಗಿದ್ದೇನೆ. ಹೀಗಾಗಿ ಕಲಿಯಬೇಕಾದ್ದು ಸಾಕಷ್ಟಿದೆ ಮತ್ತು ಕಲಿಯುತ್ತಿದ್ದೇನೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಶನಿವಾರ ಹೇಳಿದ್ದಾರೆ.
ಹರಿಯಾಣದ ಸೂರಜ್‌ಕುಂಡ್‌ನಲ್ಲಿ ನಡೆಯುತ್ತಿರುವ ಮೊದಲ ಬಾರಿಗೆ ಸಂಸತ್‌ಗೆ ಆಯ್ಕೆಯಾದ ಸಂಸದರ ಎರಡು ದಿನಗಳ ಕಾರ್ಯಾಗಾರವನ್ನು ಉದ್ದೇಶಿಸಿ ಮಾತನಾಡಿದ ಮೋದಿ, ನಾನು ಸಹ ಮೊದಲ ಬಾರಿಗೆ ಸಂಸತ್‌ಗೆ ಆಯ್ಕೆಯಾಗಿದ್ದೇನೆ. ಹೀಗಾಗಿ ನಾನು ನನ್ನ ಹಿರಿಯರಿಂದ ಸಾಕಷ್ಟು ಕಲಿಯಬೇಕಿದೆ ಎಂದರು.
ಈ ವೇಳೆ, ನಿಮಗೆ ಏನಾದರೂ ಸಹಾಯ ಬೇಕಿದ್ದರೆ ನೇರವಾಗಿ ನನ್ನ ಅಥವಾ ಪಕ್ಷದ ಅಧ್ಯಕ್ಷ ರಾಜನಾಥ್ ಸಿಂಗ್ ಅವರನ್ನು ಭೇಟಿ ಮಾಡುವಂತೆ 161 ನೂತನ ಸಂಸದರಿಗೆ ಪ್ರಧಾನಿ ಸೂಚಿಸಿದರು. ಅಲ್ಲದೆ ಭ್ರಷ್ಟಚಾರ ಮತ್ತು ಸ್ವಜನ ಪಕ್ಷಪಾತದಿಂದ ದೂರವಿರುವಂತೆ ಸಲಹೆ ನೀಡಿದರು.
ಸಂಸತ್ತಿನ ನಿಯಮಗಳನ್ನು ಪಾಲಿಸಿ ಮತ್ತು ಸಂಸತ್ ಅಧಿವೇಶನಕ್ಕೆ ಬರುವ ಮುನ್ನ ಚೆನ್ನಾಗಿ ತಯಾರಿಯಾಗಿ ಬನ್ನಿ. ನಾವು ಭಾರಿ ಬಹುಮತದಿಂದ ಗೆದ್ದು ಈಗ ಕೇಂದ್ರದಲ್ಲಿ ಕಾಂಗ್ರೆಸ್ ಮುಕ್ತ ಸರ್ಕಾರ ರಚಿಸಿದ್ದೇವೆ. ಅದೇ ರೀತಿ ವಿಧಾನಸಭೆ ಚುನಾವಣೆಗಳಲ್ಲೂ ಜಯ ಸಾಧಿಸಬೇಕು ಎಂದು ಮೋದಿ ಹೇಳಿದರು.
63 ವರ್ಷದ ಪ್ರಧಾನಿ ಮೋದಿ ಅವರು ಉತ್ತರ ಪ್ರದೇಶದ ವಾರಣಾಸಿಯಿಂದ ಮೊದಲ ಬಾರಿಗೆ ಲೋಕಸಭೆಗೆ ಆಯ್ಕೆಯಾಗಿದ್ದಾರೆ.