ಚೆನ್ನೈ ಕಟ್ಟಡ ಕುಸಿತ ಪ್ರಕರಣ: ಮೃತರ ಸಂಖ್ಯೆ 18ಕ್ಕೆ ಏರಿಕೆ
ಚೆನ್ನೈ: ಚೆನ್ನೈ ಹೊರವಲಯದ ಮೌಲಿವಾಕ್ಕಂನಲ್ಲಿ ಶನಿವಾರ ಸಂಭವಿಸಿದ್ದ 12 ಅಂತಸ್ತಿನ ನಿರ್ಮಾಣ ಹಂತದ ಕಟ್ಟಡ ಕುಸಿತ ದುರಂತದಲ್ಲಿ ಸಾವಿಗೀಡಾದವರ ಸಂಖ್ಯೆ 18ಕ್ಕೆ ಏರಿಕೆಯಾಗಿದ್ದು, ರಕ್ಷಣಾ ಕಾರ್ಯಾಚರಣೆ ಸೋಮವಾರ ಮುಂದುವರೆದಿದೆ.
ಇಂದು ಇಬ್ಬರು ಕಾರ್ಮಿಕರನ್ನು ರಕ್ಷಿಸಲಾಗಿದ್ದು, ಇಲ್ಲಿಯವರೆಗೂ ಸುಮಾರು 40 ಮಂದಿ ಕಾರ್ಮಿಕರನ್ನು ರಕ್ಷಿಸಲಾಗಿದೆ. ರಕ್ಷಿತ ಕಾರ್ಮಿಕರನ್ನು ಆಂಧ್ರಪ್ರದೇಶದ ಮೀನಮಲ್ ಹಾಗೂ ಒಡಿಶಾದ ಗೋವಿಂದ ಎಂದು ಗುರುತಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ರಕ್ಷಿತ ಕಾರ್ಮಿಕರನ್ನು ಚಿಕಿತ್ಸೆಗಾಗಿ ಶ್ರೀ ರಾಮಚಂದ್ರ ಮೆಡಿಕಲ್ ಕಾಲೇಜು ಮತ್ತು ಯುನಿರ್ವಸಿಟಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕಟ್ಟದಲ್ಲಿ ಇನ್ನೂ 25ರಿಂದ 50 ಮಂದಿ ಕಾರ್ಮಿಕರು ಸಿಲುಕಿರುವ ಶಂಕೆ ವ್ಯಕ್ತವಾಗುತ್ತಿದ್ದು, ರಕ್ಷಣಾ ಕಾರ್ಯಾಚರಣೆ ನಡೆಸುತ್ತಿರುವ ರಾಷ್ಟ್ರೀಯ ವಿಪತ್ತು ನಿರ್ವಹಣಾ ಸಿಬ್ಬಂದಿಗಳು ಅವಶೇಷಗಳಡಿಯಲ್ಲಿ ಮತ್ತಷ್ಟು ಕಾರ್ಮಿಕರು ಸಿಲುಕಿರುವ ಶಂಕೆ ಇದ್ದು, ಕಾರ್ಯಾಚರಣೆ ಮುಂದುವರೆದಿದೆ.
ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿರುವ ಸಿಬ್ಬಂದಿಗಳು ಪ್ರಸ್ತುತ ಕಟ್ಟಡದ 9ನೇ ಮಹಡಿಯವರೆವಿಗೂ ಶೋಧಕಾರ್ಯ ನಡೆಸಿದ್ದು, ಇನ್ನುಳಿದ ಕೊನೆಯ 3 ಮಹಡಿಗಳಲ್ಲಿ ಶೋಧ ಕಾರ್ಯ ಪ್ರಗತಿಯಲ್ಲಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಸ್ತುತ ಕಟ್ಟಡದ ಮಾಲೀಕ ಮನೋಹರ್ ಮತ್ತು ಆತನ ಪುತ್ರ ಮುತ್ತು ಸೇರಿದಂತೆ ಒಟ್ಟು ಆರು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಬಾಕಿ ಇಬ್ಬರು ಕಟ್ಟಡ ಕಾಮಗಾರಿ ಮೇಲುಸ್ತುವಾರಿ ನೋಡಿಕೊಳ್ಳುತ್ತಿದ್ದ ಇಂಜಿನಿಯರ್‌ಗಳು ಎಂದು ತಿಳಿದುಬಂದಿದೆ. ಬಂಧಿತರ ವಿರುದ್ದ ಐಪಿಸಿ ಸೆಕ್ಷನ್ 304 (ಹತ್ಯಾ ಪ್ರಯತ್ನ)ರ ಅಡಿಯಲ್ಲಿ ಚೆನ್ನೈ ಪೊಲೀಸರು ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿದ್ದಾರೆ.