ಯುವ ವಕೀಲೆ ಪಲ್ಲವಿ ಕೊಲೆಗಾರ ಸಜ್ಜದ್ ತಪ್ಪಿತಸ್ಥ
ಮುಂಬೈ: ಯುವ ವಕೀಲೆ ಪಲ್ಲವಿ ಪುರಕಾಯಸ್ಥ ಅವರನ್ನು ಕೊಲೆ ಮಾಡಿದ್ದು ಸೆಕ್ಯುರಿಟಿ ಗಾರ್ಡ್ ಸಜ್ಜದ್ ಅಹ್ಮದ್ ಎಂದು ಸೋಮವಾರ ನ್ಯಾಯಾಲಯ ಘೋಷಿಸಿದೆ.
2012ರ ಆಗಸ್ಟ್ 9ರಂದು ಸೆಕ್ಯುರಿಟಿ ಗಾರ್ಡ್ ಸಜ್ಜದ್ ಅಹ್ಮದ್ ವಕೀಲೆ ಪಲ್ಲವಿ ಅವರನ್ನು ಚಾಕುವಿನಿಂದ ಇರಿದು ಕೊಲೆ ಮಾಡಿರುವುದು ಸಾಭೀತಾಗಿದ್ದು, ಸಜ್ಜದ್ ಅಹ್ಮದ್ ಅಪರಾಧಿ ಎಂದು ನ್ಯಾಯಾಲಯ ಘೋಷಿಸಿದ್ದು, ಮರಣದಂಡನೆ ಅಥವಾ ಜೀವಾವಧಿ ಶಿಕ್ಷೆ ವಿಧಿಸುವ ಸಾಧ್ಯತೆ ಇದೆ.
ವೃತ್ತಿ ಪರ ವಕೀಲೆಯಾಗಿದ್ದ ಪಲ್ಲವಿ ಅವರು ರಾಷ್ಟ್ರೀಯ ಮಟ್ಟದ ಈಜುಪಟುವಾಗಿದ್ದರು. ಪಲ್ಲವಿ ಅವರು ಮುಂಬೈನ ವಡಾಲಾದ 'ಹಿಮಾಲಯನ್ ಹೈಟ್ಸ್' ಅಪಾರ್ಟ್ಮೆಂಟ್ನಲ್ಲಿ ವಾಸವಾಗಿದ್ದರು. ಅಗಸ್ಟ್ 9, 2012ರಂದು ಕ್ಷುಲಕ ಕಾರಣಕ್ಕೆ ಸ್ವತಃ ಅಪಾರ್ಟ್ಮೆಂಟ್ನ ಸೆಕ್ಯುರಿಟಿ ಗಾರ್ಡ್ನಿಂದ ಕ್ರೂರವಾಗಿ ಕೊಲೆಯಾಗಿದ್ದರು. ಘಟನೆ ನಡೆದ 24 ತಾಸುಗಳೊಳಗೆ ಮುಂಬೈ ಪೊಲೀಸರು ಆರೋಪಿಯನ್ನು ಬಂಧಿಸಿದ್ದರು.
ಅಪಾರ್ಟ್ಮೆಂಟ್ಗೆ ಹೋಗುವಾಗ ಬರುವಾಗ ಸಜ್ಜದ್ ಅಹ್ಮದ್ ಆಕೆಯನ್ನು ದುರುಗುಟ್ಟಿ ನೋಡುತ್ತಿದ್ದ ಇದರಿಂದ ಬೇಸತ್ತ ಪಲ್ಲವಿ ಅವರು ಆತನನ್ನು ದುರುಗುಟ್ಟಿ ನೋಡದಂತೆ ಹೇಳಿದ್ದರು. ಇದರಿಂದ ಕ್ರೋಧಗೊಂಡ ಸೆಕ್ಯುರಿಟಿ ಗಾರ್ಡ್ ಉಪಾಯ ಹೂಡಿ ಪಲ್ಲವಿ ಅವರ ಮನೆಯ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಿ ಸಹಾಯಕ್ಕಾಗಿ ತನ್ನನ್ನು ಕರೆಯುವಂತೆ ಮಾಡಿದ್ದಾನೆ. ನಂತರ ಎಲೆಕ್ಟ್ರೀಷನ್ ಓರ್ವನನ್ನು ಕರೆದುಕೊಂಡು ಬಂದು ವಿದ್ಯುತ್ ದುರಸ್ಥಿ ವೇಳೆ ಆಕೆಯ ಮನೆಯ ಬೀಗದ ಕೀಲಿಯನ್ನು ಲಪಾಟಾಯಿಸಿದ್ದ.
ರಾತ್ರಿ ಪಲ್ಲವಿ ಅವರು ಮಲಗಿಕೊಂಡ ನಂತರ ನಕಲಿ ಬೀಗದ ಕೀಲಿ ಮೂಲಕ ಆಕೆಯ ಮನೆ ಪ್ರವೇಶಿಸಿದ ಸಜ್ಜದ್, ಆಕೆಯ ಮೇಲೆ ಬಲತ್ಕಾರಕ್ಕೆ ಯತ್ನಿಸಿದ್ದಾನೆ. ಇದಕ್ಕೆ ಪಲ್ಲವಿ ತೀವ್ರ ಪ್ರತಿರೋಧ ಒಡ್ಡಿದ್ದು, ಸಿಟ್ಟಿನಿಂದ ಮನೆಯಲ್ಲೇ ಇದ್ದ ಚೂರಿಯಿಂದ ಆಕೆಯ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾನೆ. ತೀವ್ರ ಚೂರಿ ಇರಿತಕ್ಕೆ ಒಳಗಾಗಿದ್ದ ಪಲ್ಲವಿ ರಕ್ತ ಸ್ರಾವದಿಂದ ಮೃತಪಟ್ಟಿದ್ದರು.
ಪಲ್ಲವಿಯೊಂದಿಗೆ ವಾಸಿಸುತ್ತಿದ್ದ ಅವರ ಭಾವೀ ಪತಿ ಅವಿಕ್ ಸೇನ್ಗುಪ್ತ ಅವರು ಮೊದಲ ಬಾರಿಗೆ ಆಕೆಯನ್ನು ನೋಡಿದ್ದು, ಕೊಲೆಗೀಡಾಗಿದ್ದ ಪಲ್ಲವಿ ಅವರು ರಕ್ತದ ಮಡುವಿನಲ್ಲಿ ಬಿದ್ದದ್ದರು ಎಂದು ಸಾಕ್ಷಿ ನುಡಿದಿದ್ದರು. ಕಳೆದ ನವಂಬರ್ ತಿಂಗಳಲ್ಲಿ ಅನಾರೋಗ್ಯದ ಹಿನ್ನೆಲೆಯಲ್ಲಿ ಅವಿಕ್ ಸಾವಿಗೀಡಾಗಿದ್ದರು.
ಮರಣದಂಡನೆಗೆ ಆಗ್ರಹ
ಪಲ್ಲವಿ ಕೊಲೆ ಎರಡು ಕುಟುಂಬಗಳ ನೆಮ್ಮದಿಯನ್ನು ನಾಶ ಮಾಡಿತ್ತು. ಆಕೆಯನ್ನು ಹತ್ಯೆ ಮಾಡಿದ ಅಪರಾಧಿಗೆ ಮರಣದಂಡನೆಗಿಂತ ಕಡಿಮೆ ಶಿಕ್ಷೆ ಸಿಗಬಾರದು ಎಂದು ಪಲ್ಲವಿ ಅವರ ತಂದೆ ಕೇಂದ್ರ ಕೃಷಿ ಸಚಿವಾಲಯ ಜಂಟಿ ಕಾರ್ಯದರ್ಶಿ ಅತನು ಪುರಕಾಯಸ್ಥ ಹೇಳಿದ್ದಾರೆ.