ಮ್ಯಾಚ್ ಫಿಕ್ಸಿಂಗ್: ಲೂ ವಿನ್ಸೆಂಟ್ಗೆ ಆಜೀವ ನಿಷೇಧ
ಇಂಗ್ಲೆಂಡ್ ಕೌಂಟಿಯಲ್ಲಿ ಮ್ಯಾಚ್ ಫಿಕ್ಸಿಂಗ್...
ವೆಲ್ಲಿಂಗ್ಟನ್: ಇಂಗ್ಲೆಂಡ್ ಕೌಂಟಿಯಲ್ಲಿ ಮ್ಯಾಚ್ ಫಿಕ್ಸಿಂಗ್ ಮಾಡಿದ ಆರೋಪದಡಿ ನ್ಯೂಜಿಲೆಂಡ್ನ ಮಾಜಿ ಕ್ರಿಕೆಟಿಗ ಲೂ ವಿನ್ಸೆಂಟ್ಗೆ ಆಜೀವ ನಿಷೇಧ ಹೇರಲಾಗಿದೆ.
ಲಂಕಾಷೈರ್ ಹಾಗೂ ಸಸೆಕ್ಸ್ ಕೌಂಟಿ ಕ್ಲಬ್ ಪರ ಆಡುತ್ತಿದ್ದ ಲೂ ವಿನ್ಸೆಂಟ್ ಮೇಲೆ 14 ಕ್ಕೂ ಅಧಿಕ ಮ್ಯಾಚ್ ಫಿಕ್ಸಿಂಗ್ ಆರೋಪಗಳು ಸಾಭೀತಾಗಿರುವ ಹಿನ್ನೆಲೆಯಲ್ಲಿ ಇಂಗ್ಲೆಂಡ್ ಹಾಗೂ ವೇಲ್ಸ್ ಕ್ರಿಕೆಟ್(ಇಸಿಬಿ) ಈ ಕ್ರಮ ಕೈಗೊಂಡಿದೆ. ಇದಕ್ಕೆ ಅಂತಾರಾಷ್ಟ್ರೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಅನುಮೋದನೆ ನೀಡಿದೆ.
ಇಸಿಬಿಯ ಕಠಿಣ ನಿರ್ಧಾರದ ಕುರಿತು ಮತ್ತು ತಮ್ಮ ಅಭಿಪ್ರಾಯದ ಕುರಿತು ಪತ್ರ ಬರೆದಿರುವ ಲೂ ವಿನ್ಸೆಂಟ್ ಅವರು, 'ನಾನು ಮೋಸದಾಟದಲ್ಲಿ ಭಾಗಿಯಾಗಿರುವುದು ನಿಜ. ಈ ಬಗ್ಗೆ ನನಗೂ ವಿಷಾಧವಿದೆ. ಬುಕ್ಕಿಗಳು ನನ್ನನ್ನು ಚದುರಂಗದ ಕಾಯಿಯಂತೆ ಬಳಸಿಕೊಂಡರು. ನಾನು ಕೂಡ ಹಣದ ಆಮೀಷಕ್ಕೆ ಬಲಿಯಾಗಿ, ಕ್ರೀಡಾಸ್ಪೂರ್ತಿಯನ್ನೇ ಮರೆತು ಸಾಕಷ್ಟು ಪಂದ್ಯಗಳಲ್ಲಿ ಮೊಸದಾಟದಲ್ಲಿ ಪಾಲ್ಗೊಂಡಿದ್ದೇನೆ. ನನ್ನ ಮೋಸ ಎಲ್ಲೆ ಮೀರುತ್ತಿದೆ ಎಂದು ಅನ್ನಿಸಿದಾಗ ನಾನು ಎಲ್ಲ ಸತ್ಯವನ್ನು ಒಪ್ಪಿಕೊಂಡಿದ್ದೇನೆ. ನನ್ನ ಈ ವರ್ತನೆಯಿಂದ ದೇಶದ ಕ್ರಿಕೆಟ್ ಅಭಿಮಾನಿಗಳಿಗೆ ತುಂಬಾ ನೋವುಂಟಾಗಿದೆ ಎಂದು ನನಗೆ ತಿಳಿದಿದೆ. ನನ್ನ ಕುಟುಂಬ ಮತ್ತು ನನ್ನ ಭಾವಿ ಪತ್ನಿಗೂ ಇದರಿಂದ ನೋವುಂಟಾಗಿದೆ. ನಾನು ತುಂಬಾ ಪ್ರೀತಿಸುವ ಪಂದ್ಯವನ್ನೇ ದುರುಪಯೋಗಪಡಿಸಿಕೊಂಡೆ. ಹೀಗಾಗಿ ನನಗೆ ದೊರೆತಿರುವ ಶಿಕ್ಷೆ ಕಠಿಣವಾಗಿದ್ದರೂ ನಾನು ಅದನ್ನು ಅನುಭವಿಸುತ್ತೇನೆ ಎಂದು ಹೇಳಿದ್ದಾರೆ.
"ನನ್ನ ಈ ಸಂಕಷ್ಟದ ವೇಳೆಯಲ್ಲಿಯೂ ನನ್ನ ಜೊತೆಗಿರುವ ನನ್ನ ಕುಟುಂಬ ಮತ್ತು ನನ್ನ ಸ್ನೇಹಿತರಿಗೆ ಧನ್ಯವಾದ ತಿಳಿಸುತ್ತೇನೆ. ಅಂತೆಯೇ ಪ್ರಕರಣವನ್ನು ಯಶಸ್ವಿಯಾಗಿ ಭೇದಿಸಿದ ಎಸಿಎಸ್ಯು (Anti-Corruption and Security Unit) ತಂಡಕ್ಕೆ ಮತ್ತು ಪ್ರಕರಣದಲ್ಲಿ ವಾದ ಮಂಡಿಸಿದ ವಕೀಲ ಕ್ರಿಸ್ ಮೋರಿಸ್ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ' ಎಂದು ಲೂ ವಿನ್ಸೆಂಟ್ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
35 ವರ್ಷದ ಲೂ ವಿನ್ಸೆಂಟ್ ಅವರ ವಿರುದ್ಧ 2012ರಲ್ಲಿ ಆಕ್ಲೆಂಡ್ ಏಸಸ್ ಪರ ಆಡುವಾಗ ಎರಡು ಸಿಎಲ್ ಟಿ20 ಪಂದ್ಯಗಳನ್ನು ಫಿಕ್ಸ್ ಮಾಡಿರುವ ಆರೋಪ ಕೇಳಿ ಬಂದಿತ್ತು. ಈಗ ಆರೋಪ ಸಾಬೀತಾಗಿರುವ ಹಿನ್ನೆಲೆಯಲ್ಲಿ ಇಸಿಬಿ ಹಾಗೂ ಸಿಎಲ್ ಟಿ20 ನಿರ್ವಹಣಾ ಸಮಿತಿ ಲೂ ವಿನ್ಸೆಂಟ್ ವಿರುದ್ಧ ಕ್ರಮ ಕೈಗೊಂಡಿದೆ. ಇಸಿಬಿ, ಸಿಎಲ್ ಟಿ20 ಸಮಿತಿ ಕ್ರಮವನ್ನು ಬಿಸಿಸಿಐನ ಭ್ರಷ್ಟಾಚಾರ ನಿಗ್ರಹ ಘಟಕ ಹಾಗೂ ಆಸ್ಟ್ರೇಲಿಯಾದ ಕ್ರಿಕೆಟ್ ಮಂಡಳಿ ಸ್ವಾಗತಿಸಿವೆ.
ನ್ಯೂಜಿಲೆಂಡ್ ಕ್ರಿಕೆಟಿಗ ಲೂ ವಿನ್ಸೆಂಟ್ ಅವರು 2001 ರಿಂದ 2007ರ ತನಕ 23 ಟೆಸ್ಟ್, 102 ಏಕದಿನ ಅಂತಾರಾಷ್ಟ್ರೀಯ ಹಾಗೂ 9 ಟಿ20 ಪಂದ್ಯಗಳನ್ನಾಡಿದ್ದಾರೆ.