ಚೀನಾ: ಕುನ್ಮಿಂಗ್ ರೈಲ್ವೇ ನಿಲ್ದಾಣದಲ್ಲಿ ಚಾಕು ಇರಿತ, 33 ಸಾವು
ಚೀನಾದ ಯುನಾನ್ ಪ್ರಾಂತ್ಯದ ಕುನ್ಮಿಂಗ್ ರೈಲು ನಿಲ್ದಾಣದಲ್ಲಿ ಅಪರಿಚಿತ ದುಷ್ಕರ್ಮಿಗಳು ಜನರ ಮೇಲೆ ಮಾರಕಾಸ್ತ್ರಗಳಿಂದ 'ಅಮಾನವೀಯ'ವಾಗಿ ದಾಳಿ...
ಬೀಚಿಂಗ್: ಚೀನಾದ ಯುನಾನ್ ಪ್ರಾಂತ್ಯದ ಕುನ್ಮಿಂಗ್ ರೈಲು ನಿಲ್ದಾಣದಲ್ಲಿ ಅಪರಿಚಿತ ದುಷ್ಕರ್ಮಿಗಳು ಜನರ ಮೇಲೆ ಮಾರಕಾಸ್ತ್ರಗಳಿಂದ 'ಅಮಾನವೀಯ'ವಾಗಿ ದಾಳಿ ಮಾಡಿದ್ದು, ಘಟನೆಯಲ್ಲಿ ಸುಮಾರು 33 ಮಂದಿ ಧಾರುಣವಾಗಿ ಮೃತಪಟ್ಟಿದ್ದಾರೆ.
ಕುನ್ಮಿಂಗ್ ರೈಲ್ವೇ ನಿಲ್ದಾಣಕ್ಕೆ ನುಗ್ಗಿದ ದುಷ್ಕರ್ಮಿಗಳು ರೈಲಿಗಾಗಿ ಕಾಯುತ್ತಿದ್ದ ಮತ್ತು ರೈಲು ಟಿಕೆಟ್ ಪಡೆಯಲು ಸಾಲು ನಿಂತಿದ್ದ ಪ್ರಯಾಣಿಕರ ಮೇಲೆ ದಿಢೀರ್ ದಾಳಿ ಮಾಡಿದ್ದಾರೆ. ದುಷ್ಕರ್ಮಿಗಳು ಪ್ರಯಾಣಿಕರ ಮೇಲೆ ಚೂರಿಯಿಂದ ಮನ ಬಂದಂತೆ ದಾಳಿ ಮಾಡಿದ್ದಾರೆ. ಇದರಿಂದಾಗಿ ಸ್ಥಳದಲ್ಲೇ 33 ಮಂದಿ ಮೃತಪಟ್ಟಿದ್ದು, 130ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಕೂಡಲೆ ಸ್ಥಳಕ್ಕಾಗಮಿಸಿ ಪೊಲೀಸರು ನಾಲ್ವರು ದುಷ್ಕರ್ಮಿಗಳನ್ನು ಕೊಂದು ಹಾಕಿದ್ದು, ಓರ್ವನನ್ನು ಬಂಧಿಸಿದ್ದಾರೆ. ಇನ್ನುಳಿದ ದುಷ್ಕರ್ಮಿಗಳಿಗಾಗಿ ಪೊಲೀಸರು ಕಾರ್ಯಚರಣೆ ನಡೆಸುತ್ತಿದ್ದು, ಪ್ರತ್ಯೇಕವಾದಿ ತೀವ್ರಗಾಮಿಗಳ ಕೃತ್ಯವಿರಬಹುದೆಂದು ಶಂಕಿಸಲಾಗಿದೆ.
ನೈಋತ್ಯ ಚೀನಾದ ಯುನಾನ್ ಪ್ರಾಂತ್ಯದ ರಾಜಧಾನಿ ಮತ್ತು ದೊಡ್ಡ ನಗರವಾಗಿರುವ ಕುನ್ಮಿಂಗ್‌ನಲ್ಲಿ ಈ ದಾಳಿ ನಡೆದಿದ್ದು, ಜನರು ಬೆಚ್ಚಿ ಬೀಳುವಂತಾಗಿದೆ.