ತೃತೀಯ ರಂಗ ಕಾಂಗ್ರೆಸ್ನ್ನು ಬೆಂಬಲಿಸುತ್ತಿದೆ: ಮೋದಿ
ಪರೋಕ್ಷವಾಗಿ ಕಾಂಗ್ರೆಸ್ಗೆ ಬೆಂಬಲ ನೀಡುವುದೇ ತೃತೀಯ ರಂಗದ ಉದ್ದೇಶವಾಗಿದೆ ಎಂದು ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರು ಆರೋಪಿಸಿದ್ದಾರೆ.
ಮುಜಾಫರ್ನಗರ: ಪರೋಕ್ಷವಾಗಿ ಕಾಂಗ್ರೆಸ್ಗೆ ಬೆಂಬಲ ನೀಡುವುದೇ ತೃತೀಯ ರಂಗದ ಉದ್ದೇಶವಾಗಿದೆ ಎಂದು ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರು ಆರೋಪಿಸಿದ್ದಾರೆ.
ಇಂದು ಮುಜಾಫರ್ನಗರದಲ್ಲಿ ನಡೆದ ಬಿಜೆಪಿ ಸಮಾವೇಶದಲ್ಲಿ ಮೊದಲ ಬಾರಿಗೆ ಎಲ್ಜೆಪಿ ಮುಖ್ಯಸ್ಥ ರಾಮ್ವಿಲಾಸ್ ಪಾಸ್ವಾನ್ ಅವರೊಂದಿಗೆ ವೇದಿಕೆ ಹಂಚಿಕೊಂಡ ಮೋದಿ, ಬಿಹಾರ ಮುಖ್ಯಮಂತ್ರಿ ನಿತಿಶ್ ಕುಮಾರ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ಬಿಹಾರ ಉಗ್ರರಿಗೆ ಸ್ವರ್ಗವಾಗಿದೆ. ಮತಬ್ಯಾಂಕ್ ರಾಜಕಾರಣ ಮಾಡುತ್ತಿರುವ ಬಿಹಾರ ಸರ್ಕಾರ, ಉಗ್ರರ ವಿರುದ್ಧ ಯಾವುದೇ ಕಠಿಣ ಕ್ರಮ ತೆಗೆದುಕೊಂಡಿಲ್ಲ ಎಂದು ಮೋದಿ ಆರೋಪಿಸಿದರು.
ದೇಶದ ರಾಜಕಾರಣ ಈಗ ಎರಡು ತಂಡವಾಗಿ ಮಾರ್ಪಟ್ಟಿದೆ. ನಮ್ಮ ನೇತೃತ್ವದ ಒಂದು ತಂಡ ದೇಶದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಯತ್ನಿಸುತ್ತಿದೆ. ಆದರೆ ಮತ್ತೊಂದು ತಂಡ ಮೋದಿಯನ್ನು ತಡೆಯುವುದು ಹೇಗೆ ಎಂದು ಚಿಂತಿಸುತ್ತಿದೆ ಎಂದರು.
ಸಿಬಿಐ ಭಯದಿಂದಾಗಿ ಹಲವು ಪಕ್ಷಗಳು ಸೇರಿಕೊಂಡು ತೃತೀಯ ರಂಗವನ್ನು ರಚಿಸಿಕೊಂಡಿವೆ. ಚುನಾವಣೆ ಸಮಯದಲ್ಲಿ ಮಾತ್ರ ತೃತೀಯ ರಂಗ ಹುಟ್ಟಿಕೊಳ್ಳುತ್ತದೆ. ತೃತೀಯ ರಂಗ ಕಾಂಗ್ರೆಸ್ ರಕ್ಷಿಸುವ ಕೆಲಸ ಮಾಡುತ್ತದೆ. ಇದರ ಬೂಟಾಟಿಕೆ ಬಗ್ಗೆ ಜನರಿಗೆ ತಿಳಿದಿದೆ ಎಂದು ಮೋದಿ ತೃತೀಯ ರಂಗವನ್ನು ತರಾಟೆಗೆ ತೆಗೆದುಕೊಂಡರು.
ಈ ವೇಳೆ ಮಾತನಾಡಿದ ಪಾಸ್ವಾನ್, ದೇಶದಲ್ಲಿ ಈಗ ಮೋದಿ ಅಲೆ ಇದೆ. ಹೀಗಾಗಿ ಮೋದಿ ಅವರೇ ನಮ್ಮ ಮುಂದಿನ ಪ್ರಧಾನಿ ಎಂದು ಭವಿಷ್ಯ ನುಡಿದರು. ಪಾಸ್ವಾನ್ ಅವರು 2002ರ ಗುಜರಾತ್ ಗಲಭೆಗೆ ಮೋದಿಯೇ ಕಾರಣ ಎಂದು ಆರೋಪಿಸಿ, ಕೇಂದ್ರದ ಎನ್ಡಿಎ ಸರ್ಕಾರವನ್ನು ತೊರೆದಿದ್ದರು.