ಗೂಗಲ್‌ನಲ್ಲಿ ಅತೀ ಹೆಚ್ಚು ಶೋಧ ಮಾಡಲ್ಪಟ್ಟ ಪದ-Corruption
ಎಲ್ಲವನ್ನೂ ಗೂಗಲ್‌ನಲ್ಲಿ ಹುಡುಕಾಡಿ ಉತ್ತರ ಕಂಡುಕೊಳ್ಳುವ ನೆಟಿಜನ್‌ಗಳು ನಾವು. ಆದಾಗ್ಯೂ, ಗೂಗಲ್ ಸರ್ಚ್ ಟ್ರೆಂಡ್ ಪ್ರಕಾರ...
ಬೆಂಗಳೂರು: ಎಲ್ಲವನ್ನೂ ಗೂಗಲ್‌ನಲ್ಲಿ ಹುಡುಕಾಡಿ ಉತ್ತರ ಕಂಡುಕೊಳ್ಳುವ ನೆಟಿಜನ್‌ಗಳು ನಾವು. ಆದಾಗ್ಯೂ, ಗೂಗಲ್ ಸರ್ಚ್ ಟ್ರೆಂಡ್ ಪ್ರಕಾರ ಗೂಗಲ್‌ನಲ್ಲಿ ಅತೀ ಹೆಚ್ಚು ಬಾರಿ ಶೋಧ ಮಾಡಲ್ಪಟ್ಟ ಯಾವುದು ಗೊತ್ತಾ? ಕರಪ್ಶನ್ (ಭ್ರಷ್ಟಾಚಾರ). ಈ ಪದವನ್ನು ಬಿಟ್ಟರೆ ಜನ್‌ಲೋಕಪಾಲ್ ಮತ್ತು ಬ್ಲಾಕ್‌ಮನಿ ಎಂಬೀ ಪದಗಳು ಗೂಗಲ್‌ನಲ್ಲಿ ಹೆಚ್ಚು ಬಾರಿ ಹುಡಕಲ್ಪಟ್ಟಿದೆ ಎಂದು ಗೂಗಲ್ ತಮ್ಮ ಸುದ್ದಿಗೋಷ್ಠಿಯಲ್ಲಿ ಹೇಳಿದೆ.
ಕಳೆದ ಮೂರು ತಿಂಗಳುಗಳಲ್ಲಿ ನೆಟಿಜನ್‌ಗಳು ಗೂಗಲ್‌ನಲ್ಲಿ ಶೋಧಿಸಲ್ಪಟ್ಟ ಪದಗಳು ಅತೀ ಹೆಚ್ಚು ಬಾರಿ ಸುದ್ದಿ ಪತ್ರಿಕೆಯ ತಲೆಬರಹಗಳಲ್ಲಿ ಕಾಣಿಸಿಕೊಂಡ ಪದಗಳಾಗಿವೆ.
ಆದರ್ಶ ಹೌಸಿಂಗ್ ಸೊಸೈಟಿ ಪ್ರಕರಣ ಬಹಿರಂಗಗೊಂಡಂದಿನಿಂದ ಇಂದಿನವರೆಗೂ ಈ ಪ್ರಕರಣದ ಬಗ್ಗೆ ಹೆಚ್ಚಿನವರು ಗೂಗಲ್‌ನಲ್ಲಿ ಜಾಲಾಡಿದ್ದಾರೆ. ಇದರ ಜತೆಗೇ 2 ಜಿ ಪ್ರಕರಣ, ಕಲ್ಲಿದ್ದಲು ಘಟಕ ಹಂಚಿಕೆ ಪ್ರಕರಣಗಳ ಬಗ್ಗೆಯೂ ಹೆಚ್ಚು ಜಾಲಾಡಲಾಗಿದೆ.
ಅದೇ ವೇಳೆ ಗಲಭೆಗಳ ಬಗ್ಗೆ ಜಾಲಾಡಿದವರು 1984ರ ಸಿಖ್ ಗಲಭೆ, 2002ರ ಗುಜರಾತ್ ಗಲಭೆ ಮತ್ತು ಕಳೆದ ವರ್ಷ ಉತ್ತರಪ್ರದೇಶದಲ್ಲಿ ನಡೆದ ಮುಜಾಫರ್‌ನಗರದ ಗಲಭೆ ಬಗ್ಗೆ ಹೆಚ್ಚಿನ ಶೋಧ ನಡೆಸಿದ್ದಾರೆ.
ರಾಜಕೀಯ ವಿಷಯಕ್ಕೆ ಸಂಬಂಧಿಸಿದಂತೆ ರಾಹುಲ್ ಗಾಂಧಿಯವರ ಸಂದರ್ಶನ, ದೆಹಲಿಯಲ್ಲಿ ಆಮ್ ಆದ್ಮಿ ಪಕ್ಷದ ಗೆಲುವಿನ ಬಗ್ಗೆ ಗೂಗಲ್‌ನಲ್ಲಿ ಹುಡುಕಾಟ ನಡೆಸಲಾಗಿದೆ.
ಇನ್ನು ರಾಷ್ಟ್ರೀಯ ಯೋಜನೆಗಳ ಬಗ್ಗೆ ಗೂಗಲ್‌ನಲ್ಲಿ ಹುಡುಕಾಡಿದವರು ಹೆಚ್ಚಾಗಿ ಸಾಮಾನ್ಯ ಜನರಿಗೆ ಇರುವ ಯೋಜನೆಗಳು MNREGA, ಆರ್‌ಟಿಐ, ಆಹಾರ ಭದ್ರತಾ ಮಸೂದೆ, ಭೂಸ್ವಾಧೀನ ಮಸೂದೆ, ಲೈಂಗಿಕ ದೌರ್ಜನ್ಯ ತಡೆ ಕಾನೂನು, ತೆಲಂಗಾಣ ರೂಪೀಕರಣ ಮಸೂದೆ ಮತ್ತು ಮಹಿಳಾ ಮೀಸಲಾತಿ ಮಸೂದೆ ಬಗ್ಗೆ ಹೆಚ್ಚು ಬಾರಿ ಶೋಧ ನಡೆಸಲಾಗಿದೆ.