ಸುಬ್ರತೋ ರಾಯ್ ಮುಖಕ್ಕೆ ಕಪ್ಪು ಮಸಿ
ಸಹಾರಾ ಮುಖ್ಯಸ್ಥ ಸುಬ್ರತೋ ರಾಯ್ ಸುಪ್ರೀಂ ಕೋರ್ಟ್ಗೆ ಬರುತ್ತಿದ್ದಾಗ..
ನವದೆಹಲಿ: ಸಹಾರಾ ಮುಖ್ಯಸ್ಥ ಸುಬ್ರತೋ ರಾಯ್ ಮಂಗಳವಾರ ಸುಪ್ರೀಂ ಕೋರ್ಟ್ಗೆ ಹಾಜರಾಗಲು ಬರುತ್ತಿದ್ದಾಗ ವ್ಯಕ್ತಿಯೊಬ್ಬರು ಸುಬ್ರತೋ ಅವರ ಮುಖಕ್ಕೆ ಕಪ್ಪು ಮಸಿ ಎರಚಿದ ಘಟನೆ ನಡೆದಿದೆ.
ಮಂಗಳವಾರ ಸುಬ್ರತೋ ನ್ಯಾಯಾಲಯಕ್ಕೆ ಹಾಜರಾಗಲು ಬರುತ್ತಿದ್ದಾಗ ಕೋರ್ಟ್ ಆವರಣದ ಹೊರಗೆ ವ್ಯಕ್ತಿಯೊಬ್ಬರು ರಾಯ್ ವಿರುದ್ಧ ಘೋಷಣೆ ಕೂಗಿ ಮುಖಕ್ಕೆ ಕಪ್ಪು ಮಸಿ ಎರಚಿದ್ದಾರೆ.
ಮಸಿ ಎರಚಿದ ವ್ಯಕ್ತಿಯನ್ನು ಗ್ವಾಲಿಯಾರ್ ಮೂಲದ ಮನೋಜ್ ಶರ್ಮಾ ಎಂದು ಗುರುತಿಸಲಾಗಿದೆ.
ಸಹಾರಾ ಸಂಸ್ಥೆಯ ಹೂಡಿಕೆದಾರರ 20,000 ಕೋಟಿ ಮೌಲ್ಯದ ಷೇರುಗಳನ್ನು ಹಿಂದಿರುಗಿಸಲು ವಿಫಲರಾದ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್ ಅವರಿಗೆ ಸಮನ್ಸ್ ಜಾರಿಗೊಳಿಸಿತ್ತು. ಆದರೆ ನ್ಯಾಯಾಲಯದ ಮುಂದೆ ಅವರು ಹಾಜರಾಗಲು ವಿಫಲರಾದ ಹಿನ್ನೆಲೆಯಲ್ಲಿ ನ್ಯಾಯಾಲಯ ಜಾಮೀನು ರಹಿತ ವಾರೆಂಟ್ ಜಾರಿಗೊಳಿಸಿತ್ತು.
ಇಷ್ಟೆಲ್ಲಾ ಆದ ಮೇಲೆ ರಾಯ್ ಅವರು ಶುಕ್ರವಾರ ಲಕ್ನೋದಲ್ಲಿ ಪೊಲೀಸರಿಗೆ ಶರಣಾಗಿದ್ದು, ಇಂದು ಅಪರಾಹ್ನ 2 ಗಂಟೆಗೆ ಕೋರ್ಟ್ಗೆ ಹಾಜರಾಗಲಿದ್ದಾರೆ.