ಆಪ್-ಬಿಜೆಪಿ ಘರ್ಷಣೆ; ಆಪ್ ಕಾರ್ಯಕರ್ತರ ಬಂಧನ
ಬುಧವಾರ ಬಿಜೆಪಿ ಪ್ರಧಾನ ಕಾರ್ಯಾಲಯದ ಹೊರಗೆ ಆಮ್ ಆದ್ಮಿ ಪಕ್ಷದ ಬೆಂಬಲಿಗರು ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ನಡೆದ...
ನವದೆಹಲಿ: ಬುಧವಾರ ಬಿಜೆಪಿ ಪ್ರಧಾನ ಕಾರ್ಯಾಲಯದ ಹೊರಗೆ ಆಮ್ ಆದ್ಮಿ ಪಕ್ಷದ ಬೆಂಬಲಿಗರು ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ನಡೆದ ಘರ್ಷಣೆಗೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಆಪ್ ನಾಯಕರಾದ ಅಶತೋಷ್, ಶಾಜಿಯಾ ಇಲ್ಮೀ ಅವರ ಬಂಧನಕ್ಕೆ ಆದೇಶಿಸಿದ್ದಾರೆ. ನಿನ್ನೆ ನಡೆದ ಈ ಘಟನೆಯಲ್ಲಿ ಕನಿಷ್ಟ 14 ಆಪ್ ಕಾರ್ಯಕರ್ತರನ್ನು ಈವರೆಗೆ ಬಂಧಿಸಲಾಗಿದೆ.
ಆದಾಗ್ಯೂ, ನಿನ್ನೆ ನಡೆದ ಅಹಿತಕರ ಘಟನೆಗೆ ಕ್ಷಮೆಯಾಚಿಸಿದ ಆಪ್ ನೇತಾರ ಅರವಿಂದ್ ಕೇಜ್ರಿವಾಲ್ ಕಾರ್ಯಕರ್ತರು ಶಾಂತಿ ಕಾಪಾಡುವಂತೆ ಮನವಿ ಮಾಡಿದ್ದಾರೆ.
ಬಿಜೆಪಿ ನೇತಾರರಾದ ಡಾ.ಹರ್ಷವರ್ಧನ್, ಮುಖ್ತಾರ್ ಅಬ್ಬಾಸ್ ನಖ್ವೀ ಮತ್ತು ನಳಿನ್ ಕೊಹ್ಲಿ ಮೊದಲಾದವರು ಚುನಾವಣಾ ಆಯೋಗಕ್ಕೆ ಭೇಟಿ ನೀಡಿ ಆಪ್ ವಿರುದ್ಧ ದೂರು ನೀಡಿದ್ದಾರೆ.
ಏತನ್ಮಧ್ಯೆ, ಆಪ್ ಕಾರ್ಯಕರ್ತರ ವಿರುದ್ಧ ಮಾತ್ರ ಎಫ್ಐಆರ್ ದಾಖಲಿಸಲಾಗುತ್ತಿದೆ. ದೆಹಲಿ ಪೊಲೀಸರು ಈ ರೀತಿ ಮಾಡಿರುವುದು ಸರಿಯಲ್ಲ. ನಾವು ಬಂಧನಕ್ಕೆ ಹೆದರುವುದಿಲ್ಲ. ಈವರೆಗೆ ಯಾವುದೇ ಬಿಜೆಪಿ ಕಾರ್ಯಕರ್ತರನ್ನು ಬಂಧಿಸಿಲ್ಲ. ನಮ್ಮ ಕಾರ್ಯಕರ್ತರು ತಾವೇ ಸ್ವತಃ ಗಾಯ ಮಾಡಿಕೊಂಡರೇ? ಎಂದು ಅಶತೋಷ್ ಪೊಲೀಸರ ವಿರುದ್ಧ ಕಿಡಿ ಕಾರಿದ್ದಾರೆ.